Tuesday, May 14, 2024

In the background of shortage of teachers in state schools, the recruitment of 10 thousand more teachers is being considered this year...

  Wisdom News       Tuesday, May 14, 2024
Hedding : In the background of shortage of teachers in state schools, the recruitment of 10 thousand more teachers is being considered this year...



ಕಲಬುರಗಿ: ರಾಜ್ಯದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಿನ್ನೆಲೆ, ಈ ವರ್ಷ ಇನ್ನೂ 10 ಸಾವಿರ ಶಿಕ್ಷಕರ ನೇಮಕಾತಿ ಕುರಿತು ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಿ 14 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ, ಇದರಲ್ಲಿ 12 ಸಾವಿರ ಜನರು ಈಗಾಗಲೆ ಶಾಲೆಗೆ ಹಾಜರಾಗಿದ್ದಾರೆ. 800ರಿಂದ 900 ಜನ ವಿವಿಧ ಕಾರಣದಿಂದ ಕೋರ್ಟ್ ಮೊರೆ ಹೋಗಿದ್ದು, ಆ ಸಮಸ್ಯೆ ಸಹ ಶೀಘ್ರ ಬಗೆಹರಿಯಲಿದೆ. 12 ಸಾವಿರ ಪೈಕಿ 3,900 ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗಿದೆ. 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆ.ಕೆಆರ್.ಡಿ.ಬಿ. ಮಂಡಳಿ 2,618 ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿದ್ದು ಸ್ವಾಗತಾರ್ಹ. ಆಗಾಗ ನಿವೃತ್ತ ಕಾರಣ ಶಿಕ್ಷಕರ ಕೊರತೆ ಹೆಚ್ಚಿರುವುದರಿಂದ, ಈ ವರ್ಷ ಇನ್ನು 10 ಸಾವಿರ ಶಿಕ್ಷಕರ ಭರ್ತಿಗೆ ಚಿಂತನೆ ನಡೆದಿದೆ. ಒಟ್ಟಾರೆಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸಮಾನತೆ ಕಲ್ಪಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಸಮಸ್ಯೆ ಇರುವುದು ನಿಜ. ಇದನ್ನು ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುವುದು. ಕೆ.ಕೆ.ಆರ್.ಡಿ.ಬಿ. ಅನುದಾನ ನೀಡುತ್ತದೆ ಎಂದು ಶಿಕ್ಷಣ ಇಲಾಖೆಯು ತನ್ನ ಅನುದಾನ ಕಡಿಮೆ ಮಾಡಲ್ಲ, ಬದಲಿಗೆ ಹೆಚ್ಚಿನ ಹಣವನ್ನೇ ಈ ಭಾಗಕ್ಕೆ ನೀಡಲಿದೆ ಎಂದರು.

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯನ್ನು ಒಂದೇ ತಿಂಗಳಿನಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವುದರಿಂದ ಪರೀಕ್ಷೆಯ ಗಂಭೀರ್ಯತೆ ಇರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಮೊದಲನೇ ಪರೀಕ್ಷೆ ಎಲ್ಲರಿಗೂ ಕಡ್ಡಾಯವಾಗಿರಲಿದೆ. ಎರಡನೇ ಮತ್ತು ಮೂರನೇ ಪರೀಕ್ಷೆ ಉತ್ತಮ ಅಂಕ ಹೊಂದಲು ಮತ್ತು ಉತ್ತೀರ್ಣರಾಗಿ ಮುಂದಿನ ತರಗತಿಗೆ ಪ್ರವೇಶ ಪಡೆಯಲು ಅನುಕೂಲವಾಗಲೆಂದು ಈ ಪದ್ದತಿ ಜಾರಿಗೆ ತರಲಾಗಿದೆ. ಕಳೆದ ವರ್ಷ ಮೂರನೇ ಪರೀಕ್ಷೆಯಲ್ಲಿ ಹಾಜರಾದ 1.20 ಲಕ್ಷ ಮಕ್ಕಳಲ್ಲಿ 40 ಸಾವಿರ ಮಕ್ಕಳು ತೇರ್ಗಡೆಯಾಗಿ ಮುಂದಿನ ತರಗತಿಗೆ ಪ್ರವೇಶ ಪಡೆದಿದ್ದಾರೆ. ಇದರಿಂದ ಆ ಮಕ್ಕಳ ಒಂದು ವರ್ಷ ಉಳಿದಂತಾಗಿದೆ. ಇಲ್ಲದಿದ್ದರೆ ಆ ಮಕ್ಕಳ ಶಾಲೆಯಿಂದ ವಿಮುಖರಾರುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಮೂರು ಪರೀಕ್ಷೆ ಪದ್ದತಿಗೆ ಮಕ್ಕಳಿಂದಲೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪರೀಕ್ಷೆ ಕುರಿತಂತೆ ಸಚಿವರು ಸಮರ್ಥನೆ ಮಾಡಿಕೊಂಡರು.

ಪ್ರಸಕ್ತ 2024-25ನೇ ಸಾಲಿನ ಆಯವ್ಯದಲ್ಲಿ ರಾಜ್ಯದಾದ್ಯಂತ 500 ಕರ್ನಾಟಕ ಪಬ್ಲಿಕ್ ಆರಂಭಿಸಲು ಘೋಷಿಸಿದ್ದು, ಇದರಲಿ 137 ಶಾಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರಂಭವಾಗಲಿವೆ. ರಾಜ್ಯದಲ್ಲಿ 297 ಕೆ.ಪಿ.ಎಸ್. ಶಾಲೆ ಇದ್ದು, ಇದರ ಜೊತೆಗೆ ಈ ವರ್ಷ 500 ಶಾಲೆ ಆರಂಭಿಸಲಾಗುವುದು. ದ್ವಿಭಾಷಾ ಬೋಧನೆ, ವಿಷಯ ಶಿಕ್ಷಕರ ಜೊತೆಗೆ ದೈಹಿಕ, ಸಂಗೀತ ಶಿಕ್ಷಕರು, ಉತ್ತಮ ಮೂಲಸೌಕರ್ಯ, ಶಾಲಾ ಮೈದಾನ ಪರಿಕಲ್ಪನೆ ಒಳಗೊಂಡಿರುವ ಕೆ.ಪಿ.ಎಸ್. ಶಾಲೆಗೆ ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ 3 ವರ್ಷದಲ್ಲಿ ಎರಡು ಗ್ರಾಮ ಪಂಚಾಯತಿಗಳಿಗೆ ತಲಾ ಒಂದರಂತೆ 3,000 ಕೆ.ಪಿ.ಎಸ್. ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಯಿಂದ ವಿಮುಖ ಮಾಡಿದವರನ್ನು ಮತ್ತೆ ಸರ್ಕಾರಿ ಶಾಲೆಯತ್ತ ಸೆಳೆಯುವುದರ ಜೊತೆಗೆ ದ್ವಿಭಾಷಾ ಬೋಧನೆಯಲ್ಲಿ ಮಕ್ಕಳು, ಪಾಲಕರಿಗೆ ಅವರ ಆಯ್ಕೆಯ ಭಾಷೆಯಲ್ಲಿಯೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ರಾಜ್ಯದ್ಯಾಂತ ಇರುವ ಆದರ್ಶ ವಿದ್ಯಾಲಯದಲ್ಲಿ 11 ಮತ್ತು 12ನೇ ತರಗತಿ ಬೋಧನೆಗೆ ಈಗಾಗಲೆ ಆದೇಶ ಹೊರಡಿಸಿದೆ. ಶಾಲೆಗಳಿಗೆ ಮ್ಯಾನೇಜ್‍ಮೆಂಟ್ ಅನುದಾನ ಇಲ್ಲದೆ ಶಾಲೆಗೆ ನೀಡಲಾದ ಗಣಕಯಂತ್ರಗಳು ಧೂಳು ತಿನ್ನುತ್ತಿದ್ದವು. ಗೃಹ ಜ್ಯೋತಿ ಯೋಜನೆಯಡಿ ಕಳೆದ ನವೆಂಬರ್ 1 ರಿಂದ ಶಾಲೆಗಳಿಗೆ ಉಚಿತ ವಿದ್ಯುತ್ ಘೋಷಣೆ ಪರಿಣಾಮ ಸ್ಮಾರ್ಟ್ ಕ್ಲಾಸ್ ನಡೆಯುತ್ತಿದ್ದು, ಗಣಕಯಂತ್ರಗಳು ಮಕ್ಕಳ ಉಪಯೋಗಕ್ಕೆ ಬಂದಿವೆ. ಇದಲ್ಲದೆ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನಿರ್ವಹಣಾ ವೆಚ್ಚ 20 ರಿಂದ 40 ಸಾವಿರ ರೂ. ಗಳಿಗೆ ಅನುದಾನ ಹೆಚ್ಚಿಸಿದೆ. ಈ ಹಿಂದೆ 8ನೇ ತರಗತಿ ವರೆಗೆ ಶಾಲಾ ಮಕ್ಕಳಿಗೆ ವಾರದಲ್ಲಿ ಒಮ್ಮೆ ಮೊಟ್ಟೆ ನೀಡಲಾಗುತ್ತಿತ್ತು, ನಮ್ಮ ಸರ್ಕಾರ ಬಂದ ನಂತರ ವಾರದಲ್ಲಿ 2 ಬಾರಿ ಮೊಟ್ಟೆ ನೀಡಲಾಗುತ್ತಿದ್ದು, ಇದನ್ನು 10ನೇ ತರಗತಿ ವರೆಗೆ ವಿಸ್ತರಿಸಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರ ನೀಡುವತ್ತ ಸಹ ಇಲಾಖೆ ಗಮನಹರಿಸುತ್ತಿದೆ ಎಂದರು.

ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಸುಧಾರಣೆಗಾಗಿ 2024ರ ಮೇ ತಿಂಗಳಿನಿಂದ 2025ರ ಮಾರ್ಚ್‌ವರೆಗೆ ಈ ನಿಟ್ಟಿನಲ್ಲಿ ಅಜೀಂ ಪ್ರೇಮಜಿ ಫೌಂಡೇಷನ್ ಮತ್ತು ಟೋಯೋಟಾ ಸಂಸ್ಥೆಗಳಿಂದ ಡಿಆರ್‌ಎಫ್ ನಿಧಿಯಿಂದ 20 ಸಾವಿರ ಶಿಕ್ಷಕರಿಗೆ ವೃತ್ತಿ ಮತ್ತು ಬೋಧನಾ ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಅಕ್ಷರ ಆವಿಷ್ಕಾರ ಯೋಜನೆಯ ಪ್ರಗತಿ ವರದಿಯನ್ನು ಸಚಿವ ಎಸ್. ಮಧು ಬಂಗಾರಪ್ಪ, ಡಾ.ಅಜಯ್ ಸಿಂಗ್, ಶಾಸಕ ಎಂ.ವೈ.ಪಾಟೀಲ ಅವರು ಬಿಡುಗಡೆಗೊಳಿಸಿದರು.

logoblog

Thanks for reading In the background of shortage of teachers in state schools, the recruitment of 10 thousand more teachers is being considered this year...

Previous
« Prev Post

No comments:

Post a Comment