Hedding ; Karnataka Government Employees KGID - (Compulsory Life Insurance) Regulations...
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ ಈಗಿರುವ ನಿಯಮಗಳನ್ನು ರದ್ದುಗೊಳಿಸಿ. ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿದ್ದಾರೆ.
1.
ಹೆಸರು:- ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958 ಎಂದು ಕರೆಯತಕ್ಕದ್ದು.
2.
ತಿದ್ದುಪಡಿಗಳ ಪ್ರಾರಂಭ:- ಈ ಬಗ್ಗೆ ಎಲ್ಲಾ ತಿದ್ದುಪಡಿಗಳನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು ಮತ್ತು ಅವು ಅಂಥ ಪ್ರಕಟಣೆಯ ದಿನಾಂಕದಂದು ಜಾರಿಗೆ ಬರತಕ್ಕದ್ದು.
ಪರಿಭಾಷೆಗಳು
3. ಈ ನಿಯಮಗಳಲ್ಲಿ, ವಿಷಯದಲ್ಲಿ ಅಥವಾ ಸಂದರ್ಭದಲ್ಲಿ ಏನಾದರೂ ವಿರುದ್ಧವಾದುದು ಇದ್ದ
ಹೊರತು :-
(ಅ) “ಸರ್ಕಾರಕ್ಕೆ ಬಾಕಿಯಿರುವ ಮೊಬಲಗು" ಎಂದರೆ ಸರ್ಕಾರದ ಮೇರೆಗೆ ವಿಮಾದಾರನ / ವಿಮಾದಾರಳ ಸೇವಾ ಷರತ್ತುಗಳಿಗೆ ಸಂಬಂಧಿಸಿದ ಯಾವುದೇ ನಿಯಮ ಅಥವಾ ಆದೇಶದ ಮೇರೆಗೆ ಅಥವಾ ಯಾವುದೇ ಭದ್ರತಾ ಬಂಧ ಪತ್ರ ಅಥವಾ ಕರಾರಿನ ಮೇರೆಗೆ ಸರ್ಕಾರಕ್ಕೆ ವಿಮಾದಾರರಿಂದ ಸಂದಾಯ ಮಾಡಬೇಕಾದ ಅಥವಾ ವಿಮಾದಾರರಿಂದ ಸರ್ಕಾರವು ವಸೂಲಿ ಮಾಡಬಹುದಾದ ಯಾವುದೇ ಮೊಬಲಗು;
(ಆ) "ಸರಾಸರಿ ವೇತನ" ಎಂದರೆ ವಿಮಾದಾರರು ಹೊಂದಿರುವ ಹುದ್ದೆಯ ಕಾಲಪ್ರಮಾಣ ವೇತನದ ಕನಿಷ್ಠ ಮತ್ತು ಗರಿಷ್ಠಗಳ ಸರಾಸರಿ ಮೊಬಲಗಿಗೆ ಸಮನಾದ ಮೊಬಲಗು.
(ಇ) "ಇಲಾಖೆ" ಎಂದರೆ "ಕರ್ನಾಟಕ ಸರ್ಕಾರಿ ವಿಮಾ ಇಲಾಖೆ".
(ಈ) “ಸರ್ಕಾರ" ಎಂದರೆ ಕರ್ನಾಟಕ ಸರ್ಕಾರ
(ಉ) "ಅಪಾಯಕಾರಿ ವೃತ್ತಿ" ಎಂದರೆ ನಿರ್ದೇಶಕರಿಂದ ಅಪಾಯಕಾರಿ ವೃತ್ತಿಯೆಂದು ಘೋಷಿಸಲ್ಪಟ್ಟು, ಜೀವಕ್ಕೆ ಹೆಚ್ಚಿನ ಅಪಾಯ ಇರುವಂತ ಯಾವುದೇ ವೃತ್ತಿ.
(ಊ) "ವಿಮಾದಾರ" ಎಂದರೆ "ಈ ನಿಯಮಗಳ ಮೇರೆಗೆ ತನ್ನ ಜೀವಕ್ಕೆ ಮಾಡಿಸಿದ ವ್ಯಕ್ತಿ" ಮತ್ತು "ವಿಮಾ ಮೊತ್ತ" ಎಂದರೆ ವಿಮಾ ಪಾಲಿಸಿಯ ಮೇರೆಗೆ ಇಲಾಖೆಯ ಹೊಣೆಗಾರಿಕೆಯಿರುವ ಹಣಕಾಸಿನ ಮಿತಿ.
(ಋ) "ವೇತನ" ಎಂದರೆ "1958ರ ಕರ್ನಾಟಕ ಸಿವಿಲ್ ಸೇವಾ ನಿಯಮಗಳಲ್ಲಿ ಪರಿಭಾಷಿಸಲಾದ ವೇತನ".
(ಋ) "ಪಾಲಿಸಿ" ಎಂದರೆ ವಿಮಾದಾರರು ಸಂದಾಯ ಮಾಡಿದ ವಿಮಾ ಕಂತನ್ನು ಪರಿಗಣಿಸಿ, ಕರಾರಿನಲ್ಲಿ ನಿರ್ದಿಷ್ಟ ಪಡಿಸಲಾದ ಘಟನೆಗಳು ಸಂಭವಿಸಿದರೆ ಆ ನಿಯಮಗಳ ಮೇರೆಗೆ ನಿರ್ದಿಷ್ಟ ಮೊತ್ತವನ್ನು ಸಂದಾಯ ಮಾಡುವ ಕರಾರನ್ನು ಒಳಗೊಂಡಿರುವ ಲಿಖಿತ ದಸ್ತಾವೇಜು. ಅದು ವಿಮಾಕರ್ತ ಮತ್ತು ವಿಮಾದಾರರ ನಡುವೆ ವಿಮಾಕರಾರಿನ ಸಾಕ್ಷ್ಯವನ್ನು ಒದಗಿಸುವ ಒಂದು ದಸ್ತಾವೇಜು.
(ಎ) "ಗೊತ್ತು ಪಡಿಸಲಾದುದು" ಎಂದರೆ ಈ ನಿಯಮಗಳಲ್ಲಿ ಗೊತ್ತುಪಡಿಸಲಾದುದು.
(ಏ) "ವಿಮಾ ಕಂತು" ಎಂದರೆ ವಿಮಾದಾರನು/ಳು ಪಾಲಿಸಿಯ ಸಂಬಂಧದಲ್ಲಿ ನಿಯತಕಾಲಿಕವಾಗಿ ಸಂದಾಯ ಮಾಡಬೇಕಾದ ಮೊಬಲಗು. ಅದು ವಿಮಾ ಕರಾರಿನ ಮೇರೆಗೆ ವಿಮಾದಾರರು ಸಂದಾಯ ಮಾಡುವ ಹಣ.
(ಐ) "ಪ್ರಸ್ತಾವ ನಮೂನೆ" ಎಂದರೆ ವಿಮಾ ರಕ್ಷಣೆಯನ್ನು ಕೋರುವ ವಿಮಾದಾರರು ಭರ್ತಿ ಮಾಡಬೇಕಾದ ಸದರಿ ಇಲಾಖೆಯ ಮುದ್ರಿತ ನಮೂನೆ.
(ಒ) "ಪ್ರಸ್ತಾವನೆದಾರ" ಎಂದರೆ ವಿಮೆ ಮಾಡಿಸಲು ಪ್ರಸ್ತಾವಿಸಲಾಗಿರುವ ವ್ಯಕ್ತಿ.
(ಓ) "ನಿರ್ದೇಶಕ" ಎಂದರೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕ.
(ಡಿ) "ರಾಜ್ಯ" ಎಂದರೆ ಕರ್ನಾಟಕ ರಾಜ್ಯ
4. ಈ ನಿಯಮಗಳ ಮೇರೆಗೆ ನೀಡಲಾದ ಪಾಲಿಸಿಯ ಸಂಬಂಧದಲ್ಲಿ ವಿಮೆ ಮಾಡಲಾದ ಮೊಬಲಗನ್ನು, ಕರ್ನಾಟಕ ರಾಜ್ಯದ ಸಾರ್ವಜನಿಕ ಲೆಕ್ಕದಿಂದ ಸಂದಾಯ ಮಾಡತಕ್ಕದ್ದು.
ವಯಸ್ಸು
(ಅ) ಈ ನಿಯಮಗಳ ಮೇರೆಗೆ ವಯಸ್ಸು ವಿಮಾ ಉದ್ದೇಶಗಳಿಗಾಗಿನ ಪ್ರಸ್ತಾವನೆದಾರರ ವಯಸ್ಸು, ಸರ್ಕಾರದ ಮೇರೆಗಿನ ಸೇವಾ ಉದ್ದೇಶಗಳಿಗಾಗಿ ಸಕ್ಷಮ ಪ್ರಾಧಿಕಾರವು ಅಂಗೀಕರಿಸಲಾದ ವಯಸ್ಸಾಗಿರತಕ್ಕದ್ದು.
(ಅ) ವಿಮಾದಾರನಿಗೆ / ವಿಮಾದಾರಳಿಗೆ ಪಾಲಿಸಿಯನ್ನು ನೀಡಿದ ತರುವಾಯ ಅವನ / ಅವಳ ಜನ್ಮ ದಿನಾಂಕವನ್ನು ಸರ್ಕಾರ ಅಥವಾ ಇಲಾಖಾ ಮುಖ್ಯಸ್ಥರು ಮಾರ್ಪಾಟು ಮಾಡಿದರೆ ಅವನಿಗೆ / ಅವಳಿಗೆ ಮೂಲ ವಿಮಾ ಮೊತ್ತವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ವಿಮಾ ಭರವಸೆ ದಿನಾಂಕದಿಂದ ವಿಸ್ತ್ರತ ವಿಮಾ ಕಂತನ್ನು ಬಡ್ಡಿಯೊಂದಿಗೆ ಸಂದಾಯ ಮಾಡಲು ಆಯ್ಕೆ ಸ್ವಾತಂತ್ರ ನೀಡಲಾಗುವುದು. ಪರಂತು ಅವನ / ಅವಳ ಹೆಚ್ಚಿಸಲಾದ ವಯಸ್ಸು, ವಿಮಾ ಭರವಸೆ ದಿನಾಂಕದಂದು 50 ವರ್ಷಗಳನ್ನು ಮೀರತಕ್ಕುದಲ್ಲ.
(ಇ) ಪ್ರಸ್ತಾವನೆದಾರನ / ಪ್ರಸ್ತಾವನೆದಾರಳ ಹಿಂದಿನ ಜನನ ದಿನಾಂಕ ಅಥವಾ ಮುಂದಿನ ಜನನ ದಿನಾಂಕ ಇವೆರಡರಲ್ಲಿ ಯಾವುದು ಪ್ರಸ್ತಾವನೆ ಅಂಗೀಕರಿಸಿದ ದಿನಾಂಕಕ್ಕೆ ಸಮೀಪವೋ, ಆ ದಿನಾಂಕವನ್ನು ಪ್ರಸ್ತಾವನೆದಾರನ/ಳ ವಯಸ್ಸೆಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಅವು ಸಮಾನ ದೂರದಲ್ಲಿದ್ದರೆ, ಅವನ / ಅವಳ ಹಿಂದಿನ ಜನನ ದಿನಾಂಕದ ವಯಸ್ಸನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.

No comments:
Post a Comment