Monday, August 26, 2024

Educational Psychology- Useful Notes Growth and Development

  Wisdom News       Monday, August 26, 2024
Hedding ; Educational Psychology- Useful Notes Growth and Development....


ಮಗು (ಶಿಶು)ವಿನ ಬೆಳವಣಿಗೆ ಮತ್ತು ವಿಕಾಸ

ಬೆಳವಣಿಗೆ ಎಂಬ ಪದವನ್ನು ಪರಿಮಾಣಾತ್ಮಕ ಸ್ವರೂಪದ ಬದಲಾವಣೆಗಳನ್ನು ಸೂಚಿಸಲು ಬಳಸಲಾಗಿದೆ. ವಿಕಾಸ ಎಂಬ ಪದವನ್ನು ಗುಣಾತ್ಮಕ ಬದಲಾವಣೆಗಳನ್ನು ಸೂಚಿಸಲು ಬಳಸುವರು. ಉದಾ: ಮಗುವು ಕುಳಿತುಕೊಳ್ಳುವ, ನಿಂತುಕೊಳ್ಳುವ ಹಾಗೂ ಮಾತನಾಡುವ ಸಾಮರ್ಥ್ಯವನ್ನು ಹೊಂದುವುದು. ಬೆಳವಣಿಗೆ ಮತ್ತು ವಿಕಾಸ ಎರಡು ಪರಸ್ಪರ ಪೂರಕವಾದವುಗಳು. ವಿಕಾಸವಿಲ್ಲದೆ ಒಬ್ಬ ವ್ಯಕ್ತಿ ಬೆಳೆಯಲಾರ. ಬೆಳವಣಿಗೆಯಲ್ಲಿ ಸೂಕ್ತ ಬದಲಾವಣೆಗಳಾಗದೆ ವಿಕಾಸ ಸಾಧ್ಯವಿಲ್ಲ. ವಿಕಾಸವು ಒಂದು ನಿರಂತರ ಪ್ರಕ್ರಿಯೆಯಾಗಿದೆ. ಬೆಳವಣಿಗೆಯು ಒಬ್ಬ ವ್ಯಕ್ತಿಯು ನಿರ್ಧಿಷ್ಟ ವಯೋಮಾನಕ್ಕೆ ತಲುಪಿದಾಗ ತಟಸ್ಥಗೊಳ್ಳುತ್ತದೆ. ಆದರೆ ವಿಕಾಸ ಜೀವನ ಪರ್ಯಂತ ಸಾಗುವ ಪ್ರಕ್ರಿಯೆಯಾಗಿದೆ.

ಬೆಳವಣಿಗೆಯ ಅರ್ಥ :

ಮಗುವಿನಲ್ಲಾಗುವ ಪರಿಮಾಣಾತ್ಮಕ ಬದಲಾವಣೆಯನ್ನು ಬೆಳವಣಿಗೆ ಎನ್ನುವರು. ಉದಾ: ದೇಹದ ಗಾತ್ರ, ತೂಕ, ಎತ್ತರ.

ಮಗುವಿನ ಭೌತಿಕ ರಚನೆಯಲ್ಲಾಗುವ ಬದಲಾವಣೆಯೇ ಬೆಳವಣಿಗೆ.

ವಿಕಾಸದ ಅರ್ಥ : ಮಗು ಅಥವಾ ವ್ಯಕ್ತಿಯಲ್ಲಾಗುವ ಗುಣಾತ್ಮಕ ಬದಲಾವಣೆಯನ್ನು ವಿಕಾಸ ಎನ್ನುವರು.

ಪಕ್ವತೆಯ ಅರ್ಥ : ಮಗುವಿನಲ್ಲಿ ಅಡಕವಾಗಿರುವ ಅಂತರ್ಗತ ಸಾಮರ್ಥ್ಯಗಳನ್ನು ಸ್ವಾಭಾವಿಕವಾಗಿ ಹೊರಗೆಡಹುವುದೇ ಪಕ್ವತೆ

ಮಗುವಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ರಿಯೆಗಳಿಂದ ತೆವಳುವುದು ಕುಳಿತುಕೊಳ್ಳುವುದು ಮತ್ತು ನಡೆಯುವುದು ಮುಂತಾದವುಗಳಲ್ಲಿ ವಿಕಾಸವು ಪರಿಪಕ್ಷನದ ಪರಿಣಾಮವಾಗಿ ಕಂಡುಬರುತ್ತದೆ. ಉದಾ: ಮಗು ನಾಲ್ಕು ತಿಂಗಳಲ್ಲಿ ಆಧಾರದಿಂದ ಕುಳಿತುಕೊಳ್ಳುತ್ತಾನೆ. 6ನೇ ತಿಂಗಳಲ್ಲಿ ಆಧಾರವಿಲ್ಲದೇ ಕುಳಿತುಕೊಳ್ಳಬಲ್ಲ. 10 ನೇ ತಿಂಗಳಲ್ಲಿ ಆಧಾರದೊಂದಿಗೆ ನಿಂತುಕೊಳ್ಳಬಲ್ಲ 12ನೇ ತಿಂಗಳಲ್ಲಿ ಮೊದಲು ಪದ ಉಚ್ಚರಿಸುವುದನ್ನು ಕಲಿಯುತ್ತದೆ.

ವಿಕಾಸದ ಸಾರ್ವತ್ರಿಕ ತತ್ವಗಳು :

1) ಅನುವಂಶೀಯತೆ ಮತ್ತು ಪರಿಸರಗಳ ನಡುವಿನ ಅನ್ನೋನ್ಯ ಕ್ರಿಯೆಯ ಫಲಿತವೇ ವಿಕಾಸ : ವಿಕಾಸ ಎಂಬ ಪ್ರಕ್ರಿಯೆ ಮಗುವಿನಲ್ಲಿ ಅಂತರ್ಗತವಾಗಿರುವ ಶಕ್ತಿಗಳು ಹಾಗೂ ಅವನ ಪರಿಸರದ ನಡುವಿನ ಅಂತರ ಕ್ರಿಯೆಯ ಫಲವಾಗಿದೆ. ಮಗುವಿನಲ್ಲಿ ಅಡಕವಾಗಿರುವ ಅನುವಂಶೀಯ ಅಂಶಗಳು ಮತ್ತು ಪರಿಸರದ ಅಂಶಗಳು ಮಗುವಿನ ವಿಕಾಸದ ಮೇಲೆ ಪ್ರಭಾವ ಬೀರುತ್ತವೆ.


) ವಿಕಾಸವು ಒಂದು ಕ್ರಮಬದ್ಧ ವಿನ್ಯಾಸಕ್ಕೆ ಅನುಗುಣವಾಗಿ ನಡೆಯುತ್ತದೆ : ಪ್ರತಿಯೊಂದು ಮಗುವಿನಲ್ಲಿಯೂ ವಿಕಾಸ ಒಂದು ಕ್ರಮಬದ್ಧ ವಿನ್ಯಾಸವನ್ನು ಪಾಲಿಸುತ್ತದೆ. ಮನೋವಿಜ್ಞಾನಿಗಳು ಮಗುವಿನಲ್ಲಿ ಕಂಡುಬರುವ ವಿವಿಧ ರೀತಿಯ ವಿಕಾಸದ ವಿನ್ಯಾಸಗಳನ್ನು ಈ ಕೆಳಗಿನಂತೆ ಹೇಳಿರುತ್ತಾರೆ.

ಅ) ಶಿರ ಪಾದಾಭಿಮುಖ ವಿನ್ಯಾಸ : ವಿಕಾಸ ಯಾವಾಗಲೂ ಶಿರದ ಕಡೆಯಿಂದ ಪ್ರಾರಂಭಿಸಿ ಕಾಲುಗಳ ಕಡೆಗೆ ಸಾಗುತ್ತದೆ. ಭ್ರೂಣದ ತಲೆಯ ಭಾಗ ಅದರ ಕಾಲುಗಳಿಗಿಂತ ಮೊದಲು ಬೆಳವಣಿಗೆಯಾಗುತ್ತದೆ. ಮಗುವು ಮೊದಲು ನಿಂತುಕೊಳ್ಳುವ, ನಡೆಯುವ ಸಾಮರ್ಥ್ಯಕ್ಕಿಂತ ಮೊದಲು

ಶಿರದ ಚಲನೆಯ ಮೇಲೆ ನಿಯಂತ್ರಣ ಕಂಡು ಬರುತ್ತದೆ. 

ಆ) ಕೇಂದ್ರ ಪರಿಧಿ ಅಭಿಮುಖ ವಿನ್ಯಾಸ : ವಿಕಾಸವು ದೇಹದ ಕೇಂದ್ರ ಭಾಗದಿಂದ ಪ್ರಾರಂಭಿಸಿ ಪರಿಧಿ ಕಡೆಗೆ ಸಾಗುತ್ತದೆ. ಅಂದರೆ ಮಗುವು ಮೊದಲು ಭುಜ ಹಾಗೂ ಕೈಗಳನ್ನು ಬಳಸುತ್ತಾನೆ. ನಂತರ ತನ್ನ ಮಣಿಕಟ್ಟು ಹಾಗೂ ಬೆರಳುಗಳನ್ನು ಬಳಸುತ್ತಾನೆ.

3) ವಿಕಾಸ ನಿರಂತರವಾದುದು : ವಿಕಾಸವು ವ್ಯಕ್ತಿಯ ಗರ್ಭದೃತ ಅಂಡಾಣುವಿನಿಂದ ಉದಯಿಸಿದ ಕ್ಷಣದಿಂದ ಹಿಡಿದು ಜೀವನದ ಕೊನೆಯ ಉಸಿರಿನವರೆಗೂ ನಡೆಯುತ್ತದೆ. ಆದರೆ ಇದು ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಕಾರ್ಯಗಳಲ್ಲಿ ಕೆಲವೊಮ್ಮೆ ಶೀಘ್ರ ಬದಲಾವಣೆಗಳನ್ನು ಕಾಣಬಹುದು. ಉದಾ: ಬಾಲ್ಯದಲ್ಲಿ ಎತ್ತರ ಮತ್ತು ತೂಕದಲ್ಲಿ ಹೆಚ್ಚಳ, ಶಾಲಾ ಪೂರ್ವದಲ್ಲಿ ಪದ ಸಂಪತ್ತಿನ ಹೆಚ್ಚಳ ಮತ್ತು ತಾರುಣ್ಯಾವಸ್ಥೆಯಲ್ಲಿ ಸಮಸ್ಯೆ ಪರಿಹಾರ ಸಾಮರ್ಥ್ಯದಲ್ಲಿ ಶೀಘ್ರ ಸುಧಾರಣೆಯನ್ನು ಕಾಣಬಹುದು.

4) ವಿಕಾಸ ಎಂಬುದು ಸಂಚಿತವಾದದ್ದು :ವಿಕಾಸದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಉದಾ: ಮಗುವಿನ ಮೊದಲ ಹೆಜ್ಜೆ ಶಬ್ದ ಹಲ್ಲುಗಳು ಕಾಣಿಸಿಕೊಳ್ಳುವುದು. ಪ್ರತಿಯೊಂದು ಬದಲಾವಣೆಗಳು ವ್ಯಕ್ತಿಯ ಹಿಂದಿನ ಬೆಳವಣಿಗೆ ಮತ್ತು ಅನುಭವಗಳ ಮೇಲೆ ಅವಲಂಭಿಸಿರುತ್ತದೆ.



5) ವಿಕಾಸ ಎಂಬುದು ವ್ಯಕ್ತಿಗತ ಪ್ರಕ್ರಿಯೆ : ಪ್ರತಿಯೊಂದು ಮಗುವು ತನ್ನದೇ ಆದ ವೇಗದಲ್ಲಿದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ವಿಕಾಸ ಹೊಂದುತ್ತಾನೆ ಉದಾ: ಆರು ವರ್ಷದ ಮಕ್ಕಳನ್ನು ನಾವು ಗಮನಿಸಿದಾಗ ಅವರ ಎತ್ತರ, ತೂಕ ಮತ್ತು ಕಲಿಕೆಯ ಸಿದ್ಧತೆಯಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣುತ್ತೇವೆ. ಹೀಗಾಗಿ ವಿವಿಧ ವಯೋಮಾನದಲ್ಲಿ ಮಕ್ಕಳು ವಿವಿಧ ವೇಗದಲ್ಲಿ ವಿಕಾಸ ಹೊಂದಬಹುದು.

6) ದ್ವಿ ಪಾರ್ಶ್ವತೆಯಿಂದ ಏಕ ಪಾರ್ಶ್ವದೆಡೆಗೆ ಸಾಗುತ್ತದೆ:

ಹೊಸದಾಗಿ ಜನಿಸಿದ ಶಿಶು ಸಮರೂಪ ಜೀವಿಯಾಗಿರುತ್ತದೆ. ಕಾರ್ಯಾತ್ಮಕ ಸಮರೂಪತೆಯನ್ನು ಬಾಲ್ಯದ ಗತಿ ಸಾಮರ್ಥ್ಯದ ಬೆಳವಣಿಗೆಯಲ್ಲಿ ಕಾಣಬಹುದು. ಒಂದು ಮಗು ಎರಡುವರೆ ವರ್ಷಗಳಾಗುವವರೆಗೆ ಎರಡೂ ಕೈಗಳನ್ನೂ ಒಂದೇ ರೀತಿ ಬಳಸುತ್ತದೆ. 2 ವರ್ಷ 6 ತಿಂಗಳ ನಂತರ ಮಾತ್ರ ಕೈಗಳ ಆಯ್ಕೆ ಪ್ರಾರಂಭವಾಗುತ್ತದೆ. ಹೀಗೆ ಮಗು ದ್ವಿ ಪಾರ್ಶ್ವತೆಯಿಂದ ಏಕ ಪಾರ್ಶ್ವತೆಯೆಡೆಗೆ ಸಾಗುತ್ತದೆ.

7) ವಿಕಾಸದ ವಿವಿಧ ಅಂಶಗಳು ಒಂದಕ್ಕೊಂದು ಅಂತರ ಸಂಬಂಧ ಹೊಂದಿವೆ :

 ಮಗುವಿನ ಪ್ರಾರಂಭದ ಸಾಮಾಜಿಕ ವರ್ತನೆ ಅವನ ದೈಹಿಕ ಬೆಳವಣಿಗೆಯೊಂದಿಗೆ ಅಂತರ ಸಂಬಂಧ ಹೊಂದಿದೆ. ಒಂದು ವೇಳೆ ಮಗುವು ದೈಹಿಕ ಅಂಗವಿಕಲನಾಗಿದ್ದರೆ ಅವನ ಸಾಮಾಜಿಕ ವರ್ತನೆಯ ವಿಕಾಸವು ಕುಂಠಿತಗೊಳ್ಳುತ್ತದೆ. ಮಗುವಿನ ಗತಿ ಸಾಮರ್ಥ್ಯದ ವಿಕಾಸ ಅವನ ಜ್ಞಾನಾತ್ಮಕ ವಿಕಾಸದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಆದ್ದರಿಂದ ವಿಕಾಸದ ವಿವಿಧ ಅಂಶಗಳು ಒಂದಕ್ಕೊಂದು ಅಂತರ ಸಂಬಂಧ ಹೊಂದಿವೆ.

8) ವಿಕಾಸವು ಯಾವಾಗಲೂ ಸಾಮಾನ್ಯತೆಯಿಂದ ನಿರ್ದಿಷ್ಟತೆಯಡೆಗೆ ಸಾಗುತ್ತದೆ : 

ಮಗುವಿನ ಬೆಳವಣಿಗೆಯು ಎಲ್ಲಾ ಹಂತಗಳಲ್ಲಿ ನಿರ್ದಿಷ್ಟ ಚಟುವಟಿಕೆಗಿಂತ ಮೊದಲು ಸಾಮಾನ್ಯ ಚಟುವಟಿಕೆ ಕಂಡು ಬರುತ್ತವೆ. ಉದಾ: ಮಗುವಿನ ಭಾಷಾ ಬೆಳವಣಿಗೆ ಮೊದಲು ಜನನದ ಅಳುವಿನಿಂದ ಪ್ರಾರಂಭವಾಗಿ ನಂತರ ಅನುಕ್ರಿಯೆಯ ಪರಿಣಾಮವಾಗಿ ಹಲವಾರು ಪದಗಳನ್ನು ಕಲಿಯುತ್ತಾನೆ. ನಂತರ ಅವನಲ್ಲಿ ಸಂವಹನ ಕೌಶಲ ವಿಕಾಸವಾಗುತ್ತದೆ.

ಬೆಳವಣಿಗೆಯ ಮತ್ತು ವಿಕಾಸದ ಮೇಲೆ ಪ್ರಭಾವ ಬೀರುವ ಅಂಶಗಳು


ಪ್ರತಿಯೊಂದು ಮಗುವು ಜನನವಾಗುವಾಗ ತನ್ನ ತಂದೆ ತಾಯಿಗಳಿಂದ ಕೆಲವು ವಿಶೇಷ ಗುಣಲಕ್ಷಣಗಳನ್ನು ಪಡೆದು ಕೊಂಡು ಹುಟ್ಟುತ್ತದೆ. ಕೆಲವು ಅನುವಂಶೀಯ ಅಂಶಗಳೊಂದಿಗೆ ಜನಿಸಿದ ನಂತರ ನಾವು ಪರಿಸರದ ಸಂಪರ್ಕಕ್ಕೆ ಬರುತ್ತೇವೆ. ಅನುವಂಶೀಯತೆ ಮಗುವಿಗೆ ಕೆಲವು ಅಂಶಗಳನ್ನು ನೀಡುತ್ತದೆ. ಮತ್ತು ಪರಿಸರ ಅವುಗಳ ಮೇಲೆ ಪ್ರಭಾವ ಬೀರುತ್ತದೆ. ಅನುವಂಶೀಯತೆ ಮತ್ತು ಪರಿಸರಗಳೆರಡೂ ವ್ಯಕ್ತಿಯ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮಾನವನ ಕೆಲವು ಗುಣಲಕ್ಷಣಗಳು ಅನುವಂಶೀಯತೆ ಯಿಂದ ಪ್ರಭಾವಿತವಾದರೆ, ಮತ್ತೆ ಕೆಲವು ಪರಿಸರದಿಂದ ಪ್ರಭಾವಿತವಾಗುತ್ತವೆ. ವ್ಯಕ್ತಿಗಳು ತಮ್ಮ ಗುಣಲಕ್ಷಣಗಳನ್ನು ಅಂಕುರಾಣುಗಳು ಮತ್ತು ಅವುಗಳಲ್ಲಿರುವ ವರ್ಣತಂತುಗಳು ಹಾಗೂ ವಂಶವಾಹಿನಿಗಳ ಮೂಲಕ ವಂಶ ಪರಂಪರೆಯಾಗಿ ಪಡೆದುಕೊಳ್ಳುತ್ತಾರೆ. ಕಣ್ಣು. ಕೂದಲು, ಹಾಗೂ ಚರ್ಮಗಳ ಬಣ್ಣ ತಲೆಯ ಗಾತ್ರ, ಕೈಬೆರಳು ವಿನ್ಯಾಸ, ಲೈಂಗಿಕ ಪಕ್ವನದ ಕಾಲ ಹಾಗೂ ದೇಹದ ದೃಢತೆ ಇವುಗಳು ಮುಖ್ಯವಾಗಿ ಅನುವಂಶೀಯ ಗುಣಗಳಿಂದ ನಿರ್ಧರಿಸುತ್ತವೆ.

ಮತ್ತೊಂದು ಕಡೆ ಮನೋವೈಜ್ಞಾನಿಕ ಗುಣಗಳಾದ ಮನಃಸ್ಥಿತಿ, ಆದರ್ಶ, ಆಸಕ್ತಿಗಳು ಮತ್ತು ಮನೋಭಾವಗಳು ಪರಿಸರದಿಂದ ಪ್ರಭಾವಿತವಾಗುತ್ತವೆ. ಆದ್ದರಿಂದ ಅನುವಂಶೀಯತೆ ಮತ್ತು ಪರಿಸರಗಳೆರಡೂ ಬೆಳವಣಿಗೆ ಮತ್ತು ವಿಕಾಸದ ಮೇಲೆ ಮುಖ್ಯವಾಗಿ ಪರಿಣಾಮ ಬೀರುತ್ತವೆ. ಅವುಗಳನ್ನು ಈ ಕೆಳಗಿನಂತೆ ನೋಡಲಾಗಿದೆ.

ಅನುವಂಶೀಯತೆ:

ಅನುವಂಶೀಯತೆ ಎಂಬುದು ವಂಶಪಾರಂಪರ್ಯವಾಗಿ ಬರುವ ಗುಣ. ಅನುವಂಶೀಯ ಕ್ರಿಯೆಯ ಮೂಲಕ ಒಂದು ಜೀವಕೋಶದಿಂದ ಪ್ರಾರಂಭವಾಗಿ ವ್ಯಕ್ತಿ ಒಬ್ಬ ಪ್ರೌಢನಾಗಿ ಬೆಳವಣಿಗೆಯಾಗುವುದು ಒಂದು ಸಂಕೀರ್ಣ ಪ್ರಕ್ರಿಯೆ. ಗರ್ಭಧಾರಣೆಯ ಸಮಯದಲ್ಲಿ ಎರಡು ಅಂಕುರಾಣುಗಳು ಅಂದರೆ ತಂದೆಯಿಂದ ಬರುವ ವೀರ್ಯಾಣು ಹಾಗೂ ತಾಯಿಯಿಂದ ಬರುವ ಅಂಡಾಣು ಒಂದುಗೂಡಿ ಹೊಸ ಜೀವಿಯ ಉದಯಕ್ಕೆ ಕಾರಣವಾಗುತ್ತದೆ. ಗಂಡು ಮತ್ತು ಹೆಣ್ಣು ಜನನ ಕೋಶಗಳನ್ನು ಅಂಕುರಾಣುಗಳೆಂದು ಕರೆಯುತ್ತಾರೆ. ಗಂಡು ಮತ್ತು ಹೆಣ್ಣು ಅಂಕುರಾಣುಗಳ ಸಂಯೋಗದಿಂದ ಅಂಡಾಣು ಫಲಿತಗೊಂಡು ಜೈಗೋಟ (ಯುಗ್ಮ ಕೋಶ) ಉತ್ಪತ್ತಿಯಾಗುತ್ತದೆ. ಕೋಶ ವಿಭಜನೆಯ ಮೂಲಕ ಜೈಗೋಟ ದ್ವಿಗುಣಗೊಳ್ಳುವುದರ ಮೂಲಕ ಬೆಳವಣಿಗೆ ಮತ್ತು ವಿಕಾಸ ನಡೆಯುತ್ತದೆ.



ತಂದೆ
ವೀರ್ಯಾಣು
(23 ವರ್ಣತಂತುಗಳು)
22x ಅಥವಾ 22y
22x + 22X = ಹೆಣ್ಣು ಮಗು 
22y + 22x= ಗಂಡು ಮಗು

ತಾಯಿ
ಅಂಡಾಣು
(23 ವರ್ಣ ತಂತುಗಳು)
22x 


ವೀರ್ಯಾಣು ಮತ್ತು ಅಂಡಾಣುಗಳೆರಡನ್ನೂ ವರ್ಣತಂತು ಗಳೆನ್ನುವರು. ಮಾನವ ಜೀವ ಕೋಶಕೇಂದ್ರದಲ್ಲಿ23 ಜೊತೆ ವರ್ಣ ತಂತುಗಳನ್ನು ಹೊಂದಿರುತ್ತದೆ. ಇವುಗಳಲ್ಲಿ 22 ಜೊತೆ ಸಾಮಾನ್ಯ ವರ್ಣತಂತುಗಳು ಹಾಗೂ ಒಂದು ಜೊತೆ ಲಿಂಗ ವರ್ಣತಂತುಗಳಿರುತ್ತವೆ. 23 ವರ್ಣ ತಂತುಗಳು ತಂದೆಯಿಂದ ಹಾಗೂ 23 ವರ್ಣತಂತುಗಳು ತಾಯಿಯಿಂದ ಬಂದು ಒಂದರ ಜೊತೆಗೊಂದು ಜೋಡಣೆಯಾಗಿ ಜೋಡಿಯಾಗಿ ಕಾರ್ಯ- ನಿರ್ವಹಿಸುತ್ತವೆ. ಹೆಣ್ಣಿನಲ್ಲಿರುವ ಒಂದು ಜೊತೆ ವರ್ಣತಂತುಗಳನ್ನು 'XX' ಎಂತಲೂ ಗಂಡಿನಲ್ಲಿ 'xy' ಎಂದೂ ಹೆಸರಿಸಲಾಗಿದೆ. ಇವುಗಳಿಗೆ ಲಿಂಗವರ್ಣ ತಂತುಗಳೆಂದು ಕರೆಯುತ್ತಾರೆ. ಪ್ರತಿಯೊಂದು ವರ್ಣತಂತುವಿನಲ್ಲೂ ವಂಶವಾಹಿ ಗಳೆಂಬ ಸಾವಿರಾರು ಅತಿ ಸೂಕ್ಷ್ಮ ರಾಸಾಯನಿಕ ದ್ರವ್ಯಗಳಿರುತ್ತವೆ. ಈ ವಂಶವಾಹಿನಿಗಳೇ ಅನುವಂಶೀಯತೆಯ ಮೂಲ ಘಟಕಗಳು. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದೈಹಿಕ ಹಾಗೂ ಮಾನಸಿಕ ಗುಣಗಳು ವಂಶಪಾರಂಪರ್ಯವಾಗಿ ವರ್ಗಾವಣೆ- ಯಾಗಲು ಕಾರಣವಾದ ಅಂಶಗಳೇ ಈ ವಂಶವಾಹಿನಿಗಳು. ಪ್ರತಿಯೊಂದು ವರ್ಣತಂತುವಿನಲ್ಲಿ ಸುಮಾರು 3,000 ವಂಶವಾಹಿಗಳಿವೆಯೆಂದು ಹೇಳಲಾಗಿದೆ.

ಅನುವಂಶೀಯ ನಿಯಮಗಳನ್ನು ನಿರ್ಧರಿಸುವ ಅಂಶಗಳು

ಎ) ರೂಪಕ್ಕೆ ಪ್ರತಿರೂಪ ತತ್ವ : 

ಇದರ ಮುಖ್ಯ ಉದ್ದೇಶ ರೂಪಕ್ಕೆ ಪ್ರತಿರೂಪನಾಗಿರುವವರನ್ನು ಪಡೆಯುವುದಾಗಿದೆ. ಅಂದರೆ ಎತ್ತರವಿರುವ ತಂದೆ ತಾಯಿಗಳು ಎತ್ತರವಾಗಿರುವ ಮಕ್ಕಳನ್ನು ಪಡೆಯುವರು. ಕುಬ್ಬ ತಂದೆ ತಾಯಿಗಳು ಕುಬ್ಬ ಮಕ್ಕಳನ್ನು ಪಡೆಯುವರು ಎಂದು ತಿಳಿದು ಬರುತ್ತದೆ. ಅಂದರೆ ಸರಾಸರಿಯಾಗಿ ಮಕ್ಕಳು ತಮ್ಮ ಪೋಷಕರನ್ನೇ ಹೋಲುತ್ತಾರೆ.

ಬಿ) ಭಿನ್ನತೆಯ ತತ್ವ : 

ಮಕ್ಕಳು ಅವರ ತಂದೆ ತಾಯಿಗಳ ನಿಶ್ಚಿತ ಪ್ರತಿರೂಪದಂತಿರುವುದಿಲ್ಲ. ಅಥವಾ ಅವರ ತಂದೆ ತಾಯಿಗಳ ಬೆಳವಣಿಗೆಯಂತೆಯೇ ಆಯಾ ವಯೋಮಾನದಲ್ಲಿ ಮಕ್ಕಳ ಬೆಳವಣಿಗೆಯಿರುವದಿಲ್ಲ. ಒಂದೇ ಕುಟುಂಬದ ಮಕ್ಕಳ ಬುದ್ಧಿಶಕ್ತಿ ಗಾತ್ರ ಮತ್ತು ಮನಸ್ಥಿತಿಯ ವ್ಯತ್ಯಾದ ಕುರಿತು ಈ ತತ್ವ ತಿಳಿಸುತ್ತದೆ. ಈ ವ್ಯತ್ಯಾಸಗಳಿಗೆ ಅಂಕುರಾಣುಗಳಲ್ಲಿರುವ ವಂಶವಾಹಿನಿಗಳ ವಿವಿಧ ಜೋಡಣೆಗಳೇ ಕಾರಣ.

ಸಿ) ಸಮಾಶ್ರಯಣದ ತತ್ವ : 

ಪ್ರತಿಭಾವಂತ ತಂದೆ ತಾಯಿಗಳು ತಮಗಿಂತ ಕಡಿಮೆ 'ಪ್ರತಿಭಾನ್ವಿತ ಮಕ್ಕಳನ್ನು ಪಡೆಯುವುದು. ಅದೇ ರೀತಿ ಕಡಿಮೆ ಬುದ್ದಿ ಶಕ್ತಿ ಹೊಂದಿದ ಪೋಷಕರು ಹೆಚ್ಚು ಬುದ್ದಿಶಕ್ತಿಯ ಮಕ್ಕಳನ್ನು ಪಡೆಯುವುದು ಸಮಾಶ್ರಯಣ ಎನ್ನುವರು.


ಪರಿಸರ

ವ್ಯಕ್ತಿಯ ಜೀವನದ ಪ್ರಾರಂಭದಿಂದ ಅವನ ಮೇಲೆ ಪ್ರಭಾವ ಬೀರುವ ಬಾಹ್ಯ ಅಂಶಗಳೆಲ್ಲವೂ ಪರಿಸರವಾಗಿದೆ. ಪರಿಸರವು ಭೌತಿಕ, ಜ್ಞಾನಾತ್ಮಕ, ಸಾಮಾಜಿಕ, ನೈತಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಂವೇಗಾತ್ಮಕ ಬಲಗಳನ್ನು ಒಳಗೊಂಡಿರುತ್ತದೆ. ಮಗುವಿನ ಜನನದ ನಂತರ ವಿಕಾಸದ ಮೇಲೆ ಭೌತಿಕ, ಬೌದ್ಧಿಕ ಹಾಗೂ ಸಾಮಾಜಿಕ ಪರಿಸರಗಳು ಪ್ರಭಾವ ಬೀರುತ್ತವೆ.

ಭೌತಿಕ ಪರಿಸರ- ತಾಯಿ ಗರ್ಭಧಾರಣ ಅವಧಿಯಲ್ಲಿ ಹೊಂದಿರುವ ಪರಿಸರದ ಅಂಶಗಳು ಮಗುವಿನ ಬೆಳವಣಿಗೆಯ ಮೇಲೆ ಪರೋಕ್ಷ ಪ್ರಭಾವ ಬೀರುತ್ತವೆ. ಉದಾ: ಅವಳು ತೆಗೆದುಕೊಳ್ಳುವ ಆಹಾರ, ಮಾನಸಿಕ ಸ್ಥಿತಿ, ಅವಳು ನರಳಿದ ಖಾಯಿಲೆಗಳು ಮಗುವಿನ ಪ್ರಸವ ಪೂರ್ವ ವಿಕಾಸದ ಮೇಲೆ ಪ್ರಭಾವ ಬೀರುತ್ತವೆ. ಮಗು ಜನಿಸಿದ ನಂತರ ಮನೆಯ ಪರಿಸರದಲ್ಲಿರುವ ಘಟಕಗಳು ಅವನ ವಿಕಾಸದ ಮೇಲೆ ಪ್ರಭಾವ ಬೀರುತ್ತವೆ. ಉದಾ: ಹವಾಗುಣ, ಕೊಠಡಿಯ ಕತ್ತಲೆ, ಸ್ಥಳದ ಭೌಗೋಳಿಕ ಸ್ಥಿತಿ, ಆಹಾರ ಪೋಷಣೆ ಇತ್ಯಾದಿ.

ಬೌದ್ಧಿಕ ಪರಿಸರ :

ಮಗುವಿನ ಜ್ಞಾನಾತ್ಮಕ ವಿಕಾಸಕ್ಕೆ ಸಹಾಯಕವಾಗುವ ಎಲ್ಲಾ ಅಂಶಗಳನ್ನು ಬೌದ್ಧಿಕ ಪರಿಸರ ಎನ್ನುವರು. ಮಗುವಿಗೆ ಬೌದ್ಧಿಕ ಪ್ರಚೋದನೇ ಮನೆಯಿಂದಲೇ ಪ್ರಾರಂಭವಾಗುತ್ತದೆ. ಮಗುವಿನ ಬೌದ್ಧಿಕ ವಿಕಾಸ ಪೋಷಕರು ಒದಗಿಸಿ ಕೊಡುವ ತರಬೇತಿ ಮತ್ತು ಅನುಭವಗಳ ಮೇಲೆ ಅವಲಂಬಿಸಿರುತ್ತದೆ. ಇದರ ಜೊತೆಗೆ ಶಾಲೆಯಲ್ಲಿ ಮಗುವಿಗೆ ದೊರೆಯುವ ಬೌದ್ಧಿಕ ಅಂಶಗಳಾದ ಗ್ರಂಥಾಲಯ, ಪ್ರಯೋಗಶಾಲೆ, ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಸಂಘಟಿಸಿದರೆ ಮಗುವಿನಲ್ಲಿ ಅಪೇಕ್ಷಿತ ಜ್ಞಾನಾತ್ಮಕ ವಿಕಾಸವನ್ನು ಕಾಣಬಹುದು. ಆದ್ದರಿಂದ ಶಿಕ್ಷಕರು ಶಾಲೆಗಳಲ್ಲಿ ಉತ್ತಮ ಬೌದ್ಧಿಕ ಪರಿಸರವನ್ನು ಒದಗಿಸಿಕೊಡಬೇಕು.

ಸಾಮಾಜಿಕ ಪರಿಸರ- 

ಇದನ್ನು ಕೆಲವೊಮ್ಮೆ ಸಾಮಾಜಿಕ ಅನುವಂಶೀಯತೆ ಅಥವಾ ಸಾಮಾಜಿಕ ಪರಂಪರೆ ಎನ್ನುವರು. ಏಕೆಂದರೆ ನಮ್ಮ ಸಾಂಸ್ಕೃತಿಕ ಜೀವನ ಹಿಂದಿನ ಪೀಳಿಗೆಯಿಂದ ಹರಿದು ಬಂದಿದೆ. ಇದರ ಜೊತೆಗೆ ಕುಟುಂಬದ ವಾತಾವರಣ, ಶಾಲಾ ವಾತಾವರಣ, ಸಮ ವಯಸ್ಕರ ಗುಂಪಿನ ಸಂಬಂಧಗಳು ಸಮುದಾಯ ಮತ್ತು ನೆರೆಹೊರೆ, ಧಾರ್ಮಿಕ ಸಂಸ್ಥೆಗಳು ಮತ್ತು ಶಾಲಾ ಸಂಘಗಳು ಮಾಹಿತಿ ಮತ್ತು ಮನೋರಂಜನಾ ಮಾರ್ಗಗಳು ವ್ಯಕ್ತಿಯ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ.


ಮುಂದುವರೆಯುವುದು........




logoblog

Thanks for reading Educational Psychology- Useful Notes Growth and Development

Previous
« Prev Post

No comments:

Post a Comment