ಬೆಂಗಳೂರು, ಡಿಸೆಂಬರ್ 12; ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸಭೆಯಲ್ಲಿಯೂ ಈ ಕುರಿತು ಪ್ರಶ್ನೋತ್ತರದ ಕಲಾಪದ ಸಂದರ್ಭದಲ್ಲಿ ಚರ್ಚೆ ನಡೆದಿದೆ.
ವಿಧಾನಸಭೆಯಲ್ಲಿ ಶಾಸಕ ಐಹೊಳೆ ದುರ್ಯೋಧನ 7ನೇ ರಾಜ್ಯ ವೇತನ ಆಯೋಗದ ಕುರಿತು ಕೇಳಿರುವ ಪ್ರಶ್ನೆಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಆದರೆ ವರದಿ ಜಾರಿಗೊಳಿಸುವ ಸಂಬಂಧ ಕರ್ನಾಟಕ ಸರ್ಕಾರ ನಿಲು ಸ್ಪಷ್ಟಪಡಿಸಿಲ್ಲ ಎಂಬುದು ಸರ್ಕಾರಿ ನೌಕರರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಮುಖ್ಯಮಂತ್ರಿಗಳು ಉತ್ತರದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ದಿನಾಂಕ 9/11/2022ರ ಸರ್ಕಾರಿ ಆದೇಶದಲ್ಲಿ ತ್ರಿ ಸದಸ್ಯದ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶಿಸಲಾಗಿರುತ್ತದೆ. ದಿನಾಂಕ 6/11/2023ರ ಆದೇಶದಲ್ಲಿ ಆಯೋಗದ ಕಾಲಾವಧಿಯನ್ನು ದಿನಾಂಕ 15/3/2023ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು ಸಿದ್ದರಾಮಯ್ಯ, ಪ್ರಸ್ತುತ ರಾಜ್ಯ ಸರ್ಕಾರವು ವೇತನ ಆಯೋಗದ ಅಂತಿಮ ವರದಿಯ ನಿರೀಕ್ಷೆಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಆದರೆ 2024-25ರ ಬಜೆಟ್‌ನಲ್ಲಿ ವೇತನ ಆಯೋಗ ವರದಿ ಜಾರಿಗಾಗಿ ಅನುದಾನ ಮೀಸಲಿಡುವ ಸಂಬಂಧ ಯಾವುದೇ ಭರವಸೆ ಕೊಟ್ಟಿಲ್ಲ ಎಂಬುದು ಈಗ ಚರ್ಚೆಯ ವಿಚಾರ.
ಪ್ರತಿಪಕ್ಷಗಳ ಧರಣಿ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ವೈ. ಎ. ನಾರಾಯಣಸ್ವಾಮಿ ನಿಯಮ 330ರಡಿ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಪ್ರಶ್ನೆ ಮಾಡಿದ್ದರು. ಮುಖ್ಯಮಂತ್ರಿಗಳ ಪರವಾಗಿ ಸಭಾನಾಯಕ ಎನ್. ಎಸ್. ಬೋಸರಾಜು ಉತ್ತರ ನೀಡಿ, "2024ರ ಮಾರ್ಚ್ 15ಕ್ಕೆ ವೇತನ ಆಯೋಗದ ಅಂತಿಮ ವರದಿ ಬರಲಿದೆ. ಆ ಬಳಿಕ ಸೂಕ್ತ ನಿರ್ಧಾರ ಕೈಗೊಂಡು ನೌಕರರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ" ಎಂದು ಹೇಳಿದ್ದರು.
ಆದರೆ ಈ ಉತ್ತರದಿಂದ ತೃಪ್ತರಾಗದ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅಲ್ಲದೇ ಮುಖ್ಯಮಂತ್ರಿಗಳೇ ಬಂದು ಉತ್ತರ ನೀಡಬೇಕು ಎಂದು ಪಟ್ಟು ಹಿಡಿದಿದ್ದವು. ಅಧಿವೇಶನ ಮುಕ್ತಾಯಗೊಳ್ಳುವಾಗ ಮುಖ್ಯಮಂತ್ರಿಗಳು ಉಭಯ ಸದನದಲ್ಲಿ ಉತ್ತರ ನೀಡುತ್ತಾರೆ. ಆಗ 7ನೇ ರಾಜ್ಯ ವೇತನ ಆಯೋಗದ ವಿಚಾರ ಪ್ರಸ್ತಾಪಿಸಲಿದ್ದಾರೆಯೇ? ಕಾದು ನೋಡಬೇಕಿದೆ.
ವೈ. ಎ. ನಾರಾಯಣಸ್ವಾಮಿ ಮಾತನಾಡಿ, "ರಾಜ್ಯದಲ್ಲಿ ಜನಸಂಖ್ಯೆ 4 ಕೋಟಿ ಇದ್ದಾಗ 3.50 ಲಕ್ಷ ಸರ್ಕಾರಿ ನೌಕರರು ಇದ್ದರು. ಈಗ ಜನಸಂಖ್ಯೆ ಆರೂವರೆ ಕೋಟಿ ಆದರೂ ಸಹ ಸರ್ಕಾರಿ ನೌಕರರ ಸಂಖ್ಯೆ 5.20 ಲಕ್ಷದಷ್ಟಿದೆ. 2.25 ಲಕ್ಷ ಹುದ್ದೆಗಳು ಖಾಲಿ ಇವೆ. ಅಧಿಕಾರಿ ಮತ್ತು ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡುವಂತೆ ಆಗಿದೆ" ಎಂದರು.
ಖಾಲಿ ಇರುವ ಹುದ್ದೆಗಳಿಂದಲೇ ಸರ್ಕಾರಕ್ಕೆ ವಾರ್ಷಿಕ 8531 ಕೋಟಿ ರೂ. ವೇತನ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣದಲ್ಲಿಯೇ ಸರ್ಕಾರಿ ನೌಕರರಿಗೆ ಶೇ 23ರಷ್ಟು ವೇತನ ಪರಿಷ್ಕರಣೆ ಮಾಡಬಹುದು. ಆದರೆ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ವೇತನ ಆಯೋಗದ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಿ ವಿಳಂಬ ಧೋರಣೆ ಅನುಸರಿಸುತ್ತಿದೆ" ಎಂದು ಆರೋಪಿಸಿದರು.
ಸರ್ಕಾರಿ ನೌಕರರು ಈ ವರ್ಷದ ನವೆಂಬರ್‌ನಲ್ಲಿಯೇ ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ವರದಿ ಸ್ವೀಕಾರ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ ತನಕ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ 2024-25ರ ಬಜೆಟ್ ಮಂಡನೆ ಬಳಿಕ ವೇತನ ಆಯೋಗದ ವರದಿ ಸಲ್ಲಿಕೆಯಾಗಲಿದೆ. ಆದ್ದರಿಂದ ಬಜೆಟ್‌ನಲ್ಲಿ ವರದಿ ಅನುಷ್ಠಾನಕ್ಕೆ ಅನುದಾನವನ್ನು ಮೀಸಲಿಡಲಾಗುತ್ತದೆಯೇ? ಇನ್ನೂ ತಿಳಿಯಬೇಕಿದೆ.
ಪೂರ್ಣ ನಿವೃತ್ತಿ ವೇತನವನ್ನು ಪಡೆಯಲು ಪ್ರಸ್ತುತ 30 ವರ್ಷಗಳ ಅರ್ಹತಾ ಅವಧಿಯನ್ನು ನಿಗದಿಮಾಡಿದ್ದು, ಈ ಅವಧಿಯನ್ನು 25 ವರ್ಷಗಳಿಗೆ ನಿಗದಿಪಡಿಸಲು ಹಾಗೂ ಪಿಂಚಣಿ ನೀಡಲು ಹೆಚ್ಚಿನ ಸರಳೀಕೃತ ಸೂತ್ರವನ್ನು ಶಿಫಾರಸು ಮಾಡುವುದು ಅವಶ್ಯಕವೆಂದು ಸಂಘವು ಅಭಿಪ್ರಾಯಪಟ್ಟಿದ್ದು ಅದು ನೌಕರರಿಗೆ ಪ್ರಯೋಜನವಾಗುವುದಲ್ಲದೇ, ಕೇಂದ್ರ ವೇತನ ಆಯೋಗ ಶಿಫಾರಸು ಮಾಡಿರುವ ಸೂತ್ರಕ್ಕೆ ಹೋಲಿಕೆಯಾಗಲಿದೆ ಎಂದು ಸಂಘ ಉತ್ತರದಲ್ಲಿ ತಿಳಿಸಿದೆ.
ಪೂರ್ಣ ಪ್ರಮಾಣದ ಪಿಂಚಣಿಗಾಗಿ ನೌಕರನು ಸಲ್ಲಿಸಿರುವ 25 ವರ್ಷಗಳ ಅರ್ಹತಾದಾಯಕ ಸೇವಾಧಿಯನ್ನು ಪರಿಗಣಿಸುವುದು ಹಾಗೂ ನಿವೃತ್ತಿ ಸಮಯದ ಕಳೆದ 10 ತಿಂಗಳಲ್ಲಿ ಪಡೆಯುತ್ತಿದ್ದ ಸರಾಸರಿ ಸಂಬಳ ಅಥವಾ ಅಂತಿಮವಾಗಿ ಪಡೆದ ವೇತನದ ಶೇ 50 ಇದರಲ್ಲಿ ಯಾವುದು ಪ್ರಯೋಜನಕಾರಿಯೋ ಅದನ್ನು ಪಿಂಚಿಣಿ ಎಂದು ಪರಿಗಣಿಸುವುದು ಎಂದು ಹೇಳಿದೆ.
ಪ್ರಸ್ತುತ ಕನಿಷ್ಠ ಪಿಂಚಣಿ ಮತ್ತು ಕುಟುಂಬ ವಿಶ್ರಾಂತಿ ವೇತನವು ಮಾಹೆಯಾನ ರೂ. 8,500 ಆಗಿದ್ದು, ತುಟ್ಟಿ ಭತ್ಯೆಯನ್ನು ಸಹ ಸೇರಿಸಲಾಗುತ್ತದೆ. ನಿವೃತ್ತಿ ವೇತನದ ಗರಿಷ್ಠ ಮೊತ್ತವು ರೂ. 75,300 ಆಗಿರುತ್ತದೆ. ಈ ಮೊತ್ತವು ತಕ್ಕುದಾಗಿದೆಯೆಂದು ತಾವು ಭಾವಿಸುವಿರಾ?. ಇಲ್ಲವಾದಲ್ಲಿ ಕನಿಷ್ಠ ಮತ್ತು ಗರಿಷ್ಠ ಕುಟುಂಬ ಪಿಂಚಣಿಯು ಎಷ್ಟಿರಬೇಕು? ಎಂದು ಪ್ರಶ್ನಿಸಲಾಗಿತ್ತು.
ವಿವಿಧ ಅಂಶಗಳನ್ನು ಹಾಗೂ ಚಾಲ್ತಿ ಅಂಕಿ-ಅಂಶಗಳ ಪ್ರಕಾರ ಕನಿಷ್ಠ ಹಾಗೂ ಗರಿಷ್ಠ ಮೂಲ ವೇತನಕ್ಕೆ ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಉದ್ದೇಶಕ್ಕೆ ಹಾಲಿ ಇರುವ ಶೇ 31 ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣವಾಗಿ ವಿಲೀನಗೊಳಿಸಿ, ನಂತರ ಶೇ 40 ರಷ್ಟು ಫಿಟ್‌ಮೆಂಟ್ ಬೆನಿಫಿಟ್ ಕಲ್ಪಿಸಿ ಪರಿಷ್ಕೃತ ಮೂಲ ವೇತನದ ಶೇ 50 ಕನಿಷ್ಠ ಪಿಂಚಣಿ/ ಕುಟುಂಬ ಪಿಂಚಣಿ ಮೊತ್ತವನ್ನು ರೂ. 16,500 + ತುಟ್ಟಿ ಭತ್ಯೆ ಹಾಗೂ ಪರಿಷ್ಕೃತ ಗರಿಷ್ಠ ವೇತನದ ಶೇ 50% ರಷ್ಟು ಗರಿಷ್ಠ ಮೊತ್ತಕ್ಕೆ ರೂ. 1,50,000 + ತುಟ್ಟಿ ಭತ್ಯೆ ನಿರ್ಧರಿಸುವುದು.
ಕನಿಷ್ಠ ಕುಟುಂಬ ಪಿಂಚಣಿಯನ್ನು ಕನಿಷ್ಠ ರೂ. 16,500 + ತುಟ್ಟಿಭತ್ಯೆ ಮತ್ತು ಗರಿಷ್ಠ ಕುಟುಂಬ ಪಿಂಚಣಿಯನ್ನು ರೂ. 1,50,000 + ತುಟ್ಟಿಭತ್ಯೆ ಎಂಬುದಾಗಿ ಶಿಫಾರಸ್ಸು ಮಾಡುವುದು ಮುಂದುವರೆದು, ಅವಲಂಬಿತ ಪೋಷಕರೂ ಸಹ ಕುಟುಂಬ ಪಿಂಚಣಿಗೆ ಅರ್ಹರೆಂದು ಶಿಫಾರಸ್ಸು ಮಾಡುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರದಲ್ಲಿ ಹೇಳಿದೆ.

No comments:
Post a Comment