Saturday, December 2, 2023

Greetings from the dignitaries to the students writing the exam...

  Wisdom News       Saturday, December 2, 2023
Hedding ; Greetings from the dignitaries to the students writing the exam...


ಪರೀಕ್ಷಾ ಆತಂಕ ಪರಿಹಾರವೇನು?

ಬದಲಾದ ಸಾಮಾಜಿಕ ಪರಿಸ್ಥಿತಿಗಳಿಂದ ಹಾಗೂ ಹೆಚ್ಚಿದ ಸಾಮಾಜಿಕ ಒತ್ತಡದಿಂದ ‘ಪರೀಕ್ಷಾ ಆತಂಕ’ ಹಿಂದೆಂದೂ ಕಾಣದಷ್ಟು ಪ್ರಾಮುಖ್ಯ ಪಡೆಯುತ್ತಿದೆ. ಒಂಬತ್ತನೆಯ ತರಗತಿಯವರೆಗೆ ವಿದ್ಯಾರ್ಥಿಗಳು ನಪಾಸಾಗುವಂತಿಲ್ಲ ಎನ್ನುವ ಸತ್ಯ ಗೊತ್ತಿದ್ದರೂ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಆತಂಕವೇನೂ ಕಡಿಮೆ ಆಗಿಲ್ಲ. ಬದಲಾಗಿ ಎಲ್‌ಕೆಜಿ, ಯುಕೆಜಿಯಲ್ಲಿ ಕಲಿಯುತ್ತಿರುವ ಮಕ್ಕಳೂ ಪರೀಕ್ಷೆಯೆಂದರೆ ಭಯಪಡುವ ಸಂದರ್ಭಗಳನ್ನು ಕಾಣುತ್ತಿದ್ದೇವೆ.

ಪರೀಕ್ಷೆಗಳು ಹತ್ತಿರವಾಗುತ್ತಲೇ ಮಕ್ಕಳಿಗಿಂತಲೂ ಹೆತ್ತವರು ಹೆಚ್ಚು ಆತಂಕಿತರಾಗಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲು ಪ್ರಾರಂಭಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರದ್ದು ಅದೇ ಧಾಟಿ. ‘ಪರೀಕ್ಷೆ ಹತ್ತಿರ ಬಂತು, ಈ ಬಾರಿ ಪಬ್ಲಿಕ್ ಪರೀಕ್ಷೆ. ಗಂಭೀರವಾಗಿ ತೆಗೆದುಕೊಳ್ಳಿ’ ಎನ್ನುವ ಸಲಹೆ. ನಮಗೆ ತಿಳಿದೋ ತಿಳಿದೆಯೋ ಪರೀಕ್ಷೆ ಬಂತು ಪರೀಕ್ಷೆ ಬಂತು ಎನ್ನುವ ಧ್ವನಿ ‘ಭೂತ ಬಂತು ಭೂತ ಬಂತು’ ಎನ್ನುವ ಹಾಗೆ ಧ್ವನಿಸುತ್ತದೆ. ಅದು ನಮ್ಮ ಅರಿವಿಗೆ ಬರುವುದಿಲ್ಲ.

ಹಾಗಿದ್ದರೆ ಪರೀಕ್ಷೆಗಳ ಬಗ್ಗೆ ಭಯ ಬೇಡವೇ? ಸ್ವಲ್ಪವೂ ಭಯವಿರದಿದ್ದರೆ ಮಕ್ಕಳು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವಿರಾ? ನಿಜ. ಸಣ್ಣ ಪ್ರಮಾಣದ, ಆರೋಗ್ಯಕರ ಭಯ ವ್ಯಕ್ತಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಆದರೆ ಅದು ಅತಿಯಾಗದಂತೆ ನೋಡಿಕೊಳ್ಳಬೇಕು. ದುರದೃಷ್ಟವೆಂದರೆ ಚೆನ್ನಾಗಿ ಓದುವ ವಿದ್ಯಾರ್ಥಿಗಳು ಹಾಗೂ ಉತ್ತಮ ಅಂಕಗಳನ್ನೇ ಪಡೆದುಕೊಂಡ ವಿದ್ಯಾರ್ಥಿಗಳೂ ಹೆಚ್ಚಿನ ಪ್ರಮಾಣದಲ್ಲಿ ಆತಂಕ ಅನುಭವಿಸುವುದೂ.

ಪರೀಕ್ಷಾ ಆತಂಕದ ಲಕ್ಷಣಗಳು
1) ಭಾವನಾತ್ಮಕ ಲಕ್ಷಣಗಳು
ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ಮಕ್ಕಳಲ್ಲಿ ಹಿಂದಿನ ಪರೀಕ್ಷೆಗಳ ಕಹಿ ಅನುಭವಗಳ ನೆನಪು, ಮತ್ತೆ ಫೇಲಾದರೆ ಎನ್ನುವ ಭಯ, ಅಸಹಾಯಕತೆ, ಏನೂ ಹೊಳೆಯದಂತಹ ಸ್ಥಿತಿ, ಋಣಾತ್ಮಕ ಆಲೋಚನೆಗಳು ಕಾಡತೊಡಗುತ್ತವೆ. ತಮ್ಮನ್ನೇ ಹಳಿದುಕೊಳ್ಳುವುದು, ಮುಜುಗರ ಅನುಭವಿಸುವುದು, ಅಕಾರಣ ಸಿಟ್ಟು, ಆತಂಕ ಕಂಡುಬರುವುದು.

2) ದೈಹಿಕ ಲಕ್ಷಣಗಳು
* ವಾಕರಿಕೆ, ತಲೆಸುತ್ತು

* ಉಸಿರಾಡಲು ಕಷ್ಟವಾಗುವುದು.

* ತಲೆನೋವು

* ಹಸಿವಿಲ್ಲದಿರುವುದು

* ನಿದ್ರಾಹೀನತೆ

* ಎದೆಬಡಿತ ಜೋರಾಗುವುದು..

ಕಡಿಮೆ ಮಾಡುವುದು ಹೇಗೆ?
ಪರೀಕ್ಷೆ ಕುರಿತಾಗಿ ಶಾಲೆಯಲ್ಲಿ, ಮನೆಯಲ್ಲಿ ಕೆಲವು ವಿಚಾರಗಳನ್ನು ತಿಳಿಸಬೇಕು. ‘ನಾನು ವಿದ್ಯಾರ್ಥಿ, ನನ್ನ ಕರ್ತವ್ಯದಂತೆ ಶಾಲೆಗೆ ಹೋಗಿದ್ದೇನೆ. ಪಾಠಗಳನ್ನು ಕೇಳಿಸಿಕೊಂಡಿದ್ದೇನೆ. ನೋಟ್ಸ್ ಬರೆದುಕೊಂಡಿದ್ದೇನೆ. ಇನ್ನು ನನ್ನ ಮುಂದೆ ಇರುವುದು ಪರೀಕ್ಷೆಗೆ ಉಳಿದಿರುವ ದಿನಗಳನ್ನು ವಿಭಜಿಸಿ, ಓದಿದ್ದನ್ನು ಪುನರ್‌ ಮನನ ಮಾಡಿಕೊಂಡು ಪರೀಕ್ಷೆ ಬರೆಯುವುದು ಮಾತ್ರ. ನನ್ನ ನಿಯಂತ್ರಣದಲ್ಲಿರುವ ಕರ್ತವ್ಯವನ್ನು ನಾನು ಚೆನ್ನಾಗಿಯೇ ಮಾಡುವೆ. ನನ್ನ ಮಿತಿಯಲ್ಲಿರದ ವಿಚಾರಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನನ್ನ ಮಿತಿಯಲ್ಲಿರದ ವಿಚಾರಗಳೆಂದರೆ, ಪ್ರಶ್ನೆಪತ್ರಿಕೆ ಹೇಗಿರುತ್ತದೆ? ಮೌಲ್ಯಮಾಪನ ಹೇಗಿರುತ್ತದೆ? ನಾನು ಓದಿದ ವಿಷಯಗಳೇ ಪರೀಕ್ಷೆಗೆ ಬರುತ್ತದೋ ಇಲ್ಲವೋ, ನನಗೆ ಸಮಯ ಸಾಲದಿದ್ದರೆ? ಓದಿದ್ದು ಮರೆತು ಹೋದರೆ? ಅಂಕಗಳು ಕಡಿಮೆ ಬಂದರೆ? ನಾನು ಫೇಲಾದರೆ’ ಇಂಥ ಪ್ರಶ್ನೆಗಳನ್ನು ಗುರುತಿಸಿ ಆ ವಿಚಾರಗಳನ್ನು ಅಲಕ್ಷಿಸುವುದನ್ನು ಹೇಳಿಕೊಡಬೇಕು. ನಮ್ಮ ಗಮನ ಶೇ 100ರಷ್ಟು ಕಾರ್ಯಕ್ಷಮತೆಯ ಕಡೆ ಇರಬೇಕೇ ವಿನಃ ಶೇ 100ರಷ್ಟು ಅಂಕಗಳಲ್ಲ ಎಂದು ತಿಳಿಸಿಕೊಡಬೇಕು.

* ಪರೀಕ್ಷಾ ಆತಂಕ ಇರುವ ಮಕ್ಕಳನ್ನು ಗುರುತಿಸಿ ಈ ವಿಚಾರಗಳನ್ನು ತಿಳಿಸಬೇಕು.

* ಅಣುಕು ಪರೀಕ್ಷೆಗಳನ್ನು ನಡೆಸಿ ಅವರಲ್ಲಿನ ಕಾರ್ಯಕ್ಷಮತೆಯನ್ನು ಗುರುತಿಸಿ ಧೈರ್ಯ ತುಂಬಬೇಕು.

* ದೀರ್ಘ ಉಸಿರಾಟದ ಕ್ರಮಗಳನ್ನು ಕಲಿಸಿಕೊಡಬೇಕು.

* ಫೇಲಾಗುವ ಆತಂಕವಿದ್ದರೆ ಪದ್ಯದ ಇಡೀ ಓದಿನ ಬದಲು ಆಯ್ದ ಭಾಗಗಳನ್ನು ಸರಿಯಾಗಿ ಓದಲು ತಿಳಿಸಬೇಕು.

ಅತಿ ಆತಂಕ ಗುರುತಿಸುವುದು ಹೇಗೆ?
* ಪೋಷಕರು - ಶಿಕ್ಷಕರು ಅದೆಷ್ಟೇ ಸಮಾಧಾನ ಮಾಡಿದರೂ ಮಗು ಅತಿಯಾಗಿ ಭಯಪಡುವುದು, ಶಾಲೆ, ಪರೀಕ್ಷೆಗಳನ್ನು ತಪ್ಪಿಸುವುದು.

* ವೈದ್ಯರು ತಪಾಸಣೆ ಮಾಡಿಯೂ ಯಾವುದೇ ನಿಗದಿತ ಕಾಯಿಲೆಯಿರದಿದ್ದರೂ ನಿಲ್ಲದ ದೈಹಿಕಲಕ್ಷಣಗಳಾದ ವಾಂತಿ, ವಾಕರಿಕೆ, ನಿದ್ರಾಹೀನತೆ, ತಲೆನೋವು ಇತ್ಯಾದಿ.

* ಸದಾ ಆತಂಕಿತರಾಗಿರುವುದು, ಕಣ್ಣೀರಿಡುವುದು, ಓದಲು ನಿರಾಕರಿಸುವುದು.

* ತನ್ನನ್ನೇ ಹಳಿದುಕೊಳ್ಳುವುದು, ಬದುಕಿರುವುದು ವ್ಯರ್ಥವೆನ್ನುವಂತಹ ಮಾತುಗಳನ್ನಾಡುವುದು.

* ಅಪರಾಧಿ ಮನೋಭಾವ ಹೊಂದಿರುವುದು, ತಾನು ಒಳ್ಳೆಯ ವಿದ್ಯಾರ್ಥಿಯಲ್ಲ, ಒಳ್ಳೆಯ ಮಗ/ಮಗಳಲ್ಲ ಎನ್ನುವ ಭಾವನೆಗಳನ್ನು ಹೊಂದಿರುವುದು .

National Crime Records Bureau (NCRB) 2017-2021ರ ವರದಿಯ ಪ್ರಕಾರ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಪ್ರಕರಣಗಳು ಶೇ 21.79ರಷ್ಟು ಹೆಚ್ಚಿವೆ. ಇದು ಆತಂಕದಾಯಕ ವಿಷಯ. ಒತ್ತಡಮಯ ಶೈಕ್ಷಣಿಕ ಬದುಕಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶಿಕ್ಷಕರು ಮುಂದಾದರೆ, ಹೆತ್ತವರು ಮಕ್ಕಳಿಗೆ ಅನವಶ್ಯಕ ಒತ್ತಡ ಹೇರದೆ, ಇತರರೊಂದಿಗೆ ಹೋಲಿಕೆ ಮಾಡದೆ ಪರೀಕ್ಷೆಯ ದಿನಗಳಲ್ಲಿ ಜತೆಗಿದ್ದರೆ ಈ ಆತ್ಮಹತ್ಯೆಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಬಹುದು.

ಶಿಕ್ಷಕರಿಗೆ ಸಲಹೆಗಳು
* ಪರೀಕ್ಷೆ ಬಂತು ಓದಿ ಎಂದು ಒತ್ತಾಯ ಮಾಡುವ ಜೊತೆಗೆ ಹೇಗೆ ಓದಬೇಕು ಎಂದು ತಿಳಿಸಿಕೊಡಿ.

* ಪರೀಕ್ಷೆಯಲ್ಲಿ ಉತ್ತರ ಬರೆಯುವುದು ಕಲೆ. ಆ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಿ.

* ಸಮಯ ನಿಭಾವಣೆ ಕಲಿಸಿಕೊಡಿ.

* ಅಣುಕು ಪರೀಕ್ಷೆಗಳನ್ನು ನಡೆಸಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ.

* ಪರೀಕ್ಷಾ ತಯಾರಿಯ ವೇಳಾಪಟ್ಟಿ ತಯಾರಿಸಲು ಸಹಾಯ ಮಾಡಿ.

* ಯೋಗ - ಪ್ರಾಣಾಯಾಮಗಳನ್ನು ಕಲಿಸಿಕೊಡಿ.

* ನೀನು ಒಳ್ಳೆಯ ವಿದ್ಯಾರ್ಥಿ, ನಿಮ್ಮಿಂದ ಶಾಲೆಗೆ ರ‍್ಯಾಂಕ್ ಬಂದೇ ಬರುತ್ತದೆ ಎಂದು ನಮ್ಮ ನಿರೀಕ್ಷೆ ಎನ್ನುವಂತಹ ಮಾತುಗಳು ಬೇಡ.

* ನೀನು ಪ್ರಯತ್ನ ಪಡಬೇಕು. ನೀನು ಫೇಲಾದರೆ ಶಾಲೆಯ ಪರ್ಸಂಟೇಜ್ ಹಾಳಾಗುತ್ತದೆ ಎನ್ನುವಂತಹ ಮಾತುಗಳಂತೂ ಖಂಡಿತ ಬೇಡ.

ಹೆತ್ತವರಿಗೆ ಸಲಹೆಗಳು
* ಪರೀಕ್ಷಾ ಮುನ್ನ ತಯಾರಿಯಲ್ಲಿ ಜೊತೆಗಿರಿ.

* ಪರೀಕ್ಷಾ ತಯಾರಿಯ ವೇಳಾಪಟ್ಟಿ ತಯಾರಿಸಿ, ಹಾಗೆ ಓದಲು ತಿಳಿಸಿ.

* ಓದಿನ ಮಧ್ಯೆ ಸಣ್ಣ ವಿರಾಮಗಳನ್ನು ನೀಡಿ.

* ಈ ಸರಿ ಫೇಲಾದರೆ?, ಕಡಿಮೆ ಅಂಕ ಬಂದರೆ? ಎನ್ನುವ ಮಾತುಗಳು ಬೇಡ.

* ಫಲಿತಾಂಶದ ನಿರ್ಧರಿತ ಕಾಲೇಜಿನ ಆಯ್ಕೆ - ಕೋರ್ಸಿನ ಆಯ್ಕೆ ಕುರಿತು ಹೇಳಿ ಭಯಪಡಿಸುವುದು ಬೇಡ.

logoblog

Thanks for reading Greetings from the dignitaries to the students writing the exam...

Previous
« Prev Post

No comments:

Post a Comment