ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ 2023-24ನೇ ಸಾಲಿನ ವರ್ಗಾವಣೆ ಕುರಿತು ಪ್ರಮುಖ ಮಾಹಿತಿಯೊಂದಿದೆ. ಶಾಲಾ ಶಿಕ್ಷಣ ಇಲಾಖೆ ವರ್ಗಾವಣೆಗೆಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಅಧಿಸೂಚನೆ 2023-24ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕರು/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಕರು/ ಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳನ್ನು ಮುಂದುವರೆಸಿ ಪರಿಷ್ಕೃತ ವೇಳಾ ಪಟ್ಟಿ ಬಿಡುಗಡೆ ಮಾಡಿದೆ ಎಂಬ ವಿಷಯವನ್ನು ಒಳಗೊಂಡಿದೆ.
ಅಧಿಸೂಚನೆ ವಿವರಗಳು: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ: 04] ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ನಿಯಮಗಳಲ್ಲಿನಂತೆ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು/ ತತ್ಸಮಾನ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ವರ್ಗಾವಣೆ, ಪ್ರಕ್ರಿಯೆಗೆ ಮಾರ್ಗಸೂಚಿಗಳನ್ನೊಳಗೊಂಡಂತೆ ವೇಳಾಪಟ್ಟಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಗಿದ್ದು ಸದರಿ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆಯನ್ನು ಮುಂದುವರೆಸುವ ಕುರಿತಂತೆ ಸರ್ಕಾರಕ್ಕೆ ಏಕ ಕಡತದಲ್ಲಿ ಅನುಮೋದನೆ ಕೋರಿ ಸಲ್ಲಿಸಲಾಗಿರುತ್ತದೆ. ಸರ್ಕಾರ ಪರಿಶೀಲಿಸಿ ಸದರಿ ವರ್ಗಾವಣಾ ಪ್ರಕ್ರಿಯೆಯನ್ನು ಮುಂದುವರೆಸಲು ಅನುಮೊದನೆ ನೀಡಿರುತ್ತದೆ.
2020ರಲ್ಲಿ ಜಾರಿಯಾದ ಶಿಕ್ಷಕರ ವರ್ಗಾವಣೆ ಕಾಯ್ದೆಯಂತೆ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಮತ್ತು ಕಡ್ಡಾಯ ವಲಯ ವರ್ಗಾವಣೆಗಳನ್ನು ಒಂದರ ನಂತರ ಒಂದನ್ನು ಪರ್ಯಾಯ ವರ್ಷಗಳಲ್ಲಿ ಹಮ್ಮಿಕೊಳ್ಳಬೇಕಾಗಿರುತ್ತದೆ.
ಪ್ರಸ್ತುತ ದಿನಾಂಕ 15/03/2024ರ ಅಧಿಸೂಚನೆಯಂತೆ ಕಡ್ಡಾಯ ವಲಯ ವರ್ಗಾವಣೆ ಒಳಗೊಂಡಂತೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು. ಈ ಮಧ್ಯ ಲೋಕಸಭಾ ಚುನಾವಣಾ ಘೋಷಣೆಯಾದ ಹಿನ್ನೆಲೆಯಲ್ಲಿ ಇಡೀ ವರ್ಗಾವಣೆ ಪ್ರಕ್ರಿಯೆಯು ಸರಿ ಸುಮಾರು 3 ತಿಂಗಳ ಕಾಲ ಮುಂದೂಡುವ ಅನಿವಾರ್ಯತೆ ಉದ್ಭವಿಸಿದ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಕ್ರಿಯೆನ್ನು ಮುಂದುವರಿಸಲು ಸಾಧ್ಯವಾಗಿರುವುದಿಲ್ಲ.
ಸರ್ಕಾರದ ಆದೇಶದಂತೆ ಶೈಕ್ಷಣಿಕ ವರ್ಷ ಪಾರಂಭಿಸಿದ ನಂತರ ವಲಯ ವರ್ಗಾವಣೆ ಮಾಡುವುದು ಸೂಕ್ತವಲ್ಲವಾದ್ದರಿಂದ, ಪ್ರಸ್ತುತ ವರ್ಷ ವರ್ಗಾವಣೆಯಲ್ಲಿ ಮಾತ್ರ ವಲಯ ವರ್ಗಾವಣೆಯನ್ನು ಕೈಬಿಟ್ಟು ಇತರೆ ವರ್ಗಾವಣೆಗಳನ್ನು ಮುಂದುವರೆಸಲು ಅನುಮತಿಸಿರುತ್ತದೆ. ಆದ್ದರಿಂದ 2023-24ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ವಲಯ ವರ್ಗಾವಣೆ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.
ಎಲ್ಲಾ ಸಾಮಾನ್ಯ/ ಪರಸ್ಪರ ವರ್ಗಾವಣೆಗಳನ್ನು On Line ಮೂಲಕವೇ ನಿರ್ವಹಿಸಬೇಕಾಗಿದ್ದು ಶಿಕ್ಷಕರು ವರ್ಗಾವಣಾ ಅರ್ಜಿ ಸಲ್ಲಿಸುವುದು, ಅರ್ಜಿಗಳ ಆದ್ಯತೆಗಳ ಪರಿಶೀಲನೆ, ಅರ್ಜಿಗಳ/ ಆದ್ಯತೆಗಳ ಅನುಮೋದನೆ/ ತಿರಸ್ಕಾರ, ಕರಡು ಅರ್ಹ/ ಅನರ್ಹ(ಕಾರಣ ಸಹಿತ) ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸಲ್ಲಿಕೆ, ಅಂತಿಮ ಆದ್ಯತಾ ಪಟ್ಟಿ ಪ್ರಕಟಣೆ, ಆದ್ಯತಾ ಪಟ್ಟಿ ಅನುಸಾರ ವರ್ಗಾವಣಾ ಕೌನ್ಸೆಲಿಂಗ್ ಪ್ರಕ್ರಿಯೆಗಳು ಇಲಾಖೆಯ ನಿಗದಿತ ತಂತ್ರಾಂಶದಲ್ಲಿಯೇ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಉಳಿದಂತೆ ಸದರಿ ವರ್ಗಾವಣಾ ಪ್ರಕ್ರಿಯೆಯ ಮಾನದಂಡಗಳು ಯತಾವತ್ತಾಗಿ ಮುಂದುವರೆಯುತ್ತದೆ.
ಚುನಾವಣ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಹಿಂದೆ ಸದರಿ ವರ್ಗಾವಣೆಗೆ ನಿಗಧಿಪಡಿಸಿದ ವೇಳಾಪಟ್ಟಿಯಂತೆ ಪ್ರಕ್ರಿಯೆ ನಿರ್ವಹಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ದಿನಗಳಿಗೆ ವೇಳಾಪಟ್ಟಿಯನ್ನು ಪರಿಷ್ಕರಿಸಿ ವಿಸ್ತರಿಸಿದ್ದು ಅದರಂತೆ ಅರ್ಜಿ ಸಲ್ಲಿಸುವ ದಿನಾಂಕವನ್ನು 20/06/2024ಕ್ಕೆ ವಿಸ್ತರಿಸಿ ಅಂತಿಮಗೊಳಿಸಿದ ಪ್ರಯುಕ್ತ ನಿಯಮಾನುಸಾರ ಕೊರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸುವುದು ಅದರಂತೆ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲು ಎಲ್ಲಾ ಪ್ರಾಧಿಕಾರಿಗಳಿಗೆ ಸೂಚಿಸಿದೆ.
ವರ್ಗಾವಣಾ ಅಧಿನಿಯಮ ಮತ್ತು ನಿಯಮಗಳನ್ನು ಎಲ್ಲಾ ಹಂತದ ವರ್ಗಾವಣಾ ಪ್ರಾಧಿಕಾರಿಗಳು ಕಡ್ಡಾಯವಾಗಿ ಓದಿಕೊಳ್ಳತಕ್ಕದ್ದು. ಮಾರ್ಗಸೂಚಿಗಳಲ್ಲಿ ತಿಳಿಸಿರುವಂತೆ ಹಾಗೂ ಶಿಕ್ಷಕರ ವರ್ಗಾವಣೆ ಕಾಯ್ದೆ/ ನಿಯಮಗಳು-2020 ಮತ್ತು ತಿದ್ದುಪಡಿ ಕಾಯ್ದೆ/ ನಿಯಮಗಳು-2022ರ ಪ್ರಕಾರ ಕ್ರಮವಹಿಸಲು ಸೂಚಿಸಲಾಗಿದೆ.
ಸಿದ್ಧಪಡಿಸಿದ ಅಧಿಸೂಚನೆಯು, ತಾಂತ್ರಿಕ/ ಆಡಳಿತಾತ್ಮಕ ಕಾರಣಗಳಿಂದಾಗಿ ವ್ಯತ್ಯಯಗಳುಂಟಾದಲ್ಲಿ ಅವಶ್ಯಕತೆಗೆ ಅನುಗುಣವಾಗಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಪರತ್ತಿಗೆ ಒಳಪಟ್ಟಿರುತ್ತದೆ. ಈ ಸಂಬಂಧ ಪ್ರಕ್ರಿಯೆಯನ್ನು ನಿರ್ವಹಿಸುವ ಸಲುವಾಗಿ ಪರಿಷ್ಕತ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಮುಂದಿನ ಕ್ರಮಕ್ಕೆ ಸಕ್ಷಮ ಪ್ರಾಧಿಕಾರಿಗಳಿಗೆ ಯಾವುದೇ ಲೋಪವಾಗದಂತೆ ಅನುಷ್ಠಾನಕ್ಕೆ ಸೂಚಿಸಿದೆ.

No comments:
Post a Comment