World Earth Day 2024...
🌹ಇಂದು ವಿಶ್ವ ಭೂ ದಿನ | ಭೂಮಿಗಾಗಿ ಒಂದಾಗೋಣ🌹
ಏಪ್ರಿಲ್ 22
ಭೂಮಿಯ ಮೇಲೆ ಎಲ್ಲಕ್ಕಿಂತಲೂ ಅತ್ಯಂತ ಅಪಾಯಕಾರಿಯಾದದ್ದು ಹವಾಮಾನ ಬದಲಾವಣೆ. ಈ ಬಗ್ಗೆ ಗಮನಹರಿಸಲೇಬೇಕಾದ ಜರೂರನ್ನು ‘ವಿಶ್ವ ಭೂ ದಿನ’ (ಏ. 22) ನಮಗೆ ನೆನಪಿಸುತ್ತಿದೆ.
ಅಮೆರಿಕದ ಕೈಗಾರಿಕಾ ಕ್ರಾಂತಿಯು ಉಚ್ಛ್ರಾಯದ ಸ್ಥಿತಿಯಲ್ಲಿದ್ದ 60 ರ ದಶಕದಲ್ಲಿ, ಬರಡಾಗುತ್ತಿದ್ದ ಭೂಮಿಗಾಗಿ ಮರುಗಿದ ದಿನವಿದು. ವಿಪರೀತವೆಂಬಂತೆ ಹೆಚ್ಚುತ್ತಿದ್ದ ಕಾರ್ಖಾನೆಗಳು, ಆಟೊಮೊಬೈಲ್ ಉದ್ದಿಮೆಯಿಂದ ಕಲುಷಿತಗೊಳ್ಳುತ್ತಿದ್ದ ಗಾಳಿ, ಮಲಿನವಾಗುತ್ತಿದ್ದ ನೀರು, ಇಂತಹ ಬೆಳವಣಿಗೆಯು ತಂದೊಡ್ಡುತ್ತಿದ್ದ ಅನಾರೋಗ್ಯದಿಂದ ಮನುಷ್ಯರನ್ನು ಪಾರು ಮಾಡುವ ಪ್ರಯತ್ನವಾಗಿ ಹುಟ್ಟಿಕೊಂಡಿತು.
ಹೀಗೆ, ಸುಮಾರು 50 ವರ್ಷಗಳ ಹಿಂದೆ ವಿಶ್ವ ಭೂ ದಿನವನ್ನು ಪ್ರಾರಂಭಿಸಲು ಶ್ರಮಿಸಿದ ಹೋರಾಟಗಾರರಲ್ಲಿ ಅಮೆರಿಕದ ಡೆನಿಸ್ ಹೇಸ್ ಅವರೂ ಒಬ್ಬರು. ಪರಿಸರ ಹೋರಾಟಗಾರ ಮತ್ತು ಸೌರಶಕ್ತಿಯ ಪ್ರತಿಪಾದಕ ಹೇಸ್, 25 ರ ಹರಯದಲ್ಲೇ ಪರಿಸರ ಹೋರಾಟಕ್ಕೆ ಇಳಿದವರು. 1969 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣವನ್ನು ಮೊಟಕುಗೊಳಿಸಿ, ಬೃಹತ್ ಪರಿಸರ ಹೋರಾಟಗಳನ್ನು ರೂಪಿಸಿದವರು. ಈ ದಿಸೆಯಲ್ಲಿ *1970 ರ ಏ. 22 ರಂದು ಅವರು ಭಾರಿ ಮೆರವಣಿಗೆ ನಡೆಸಿದ ದಿನವನ್ನೇ ವಿಶ್ವ ಭೂ ದಿನ* ಎಂದು ಹೆಸರಿಸಲಾಯಿತು. ಇಂತಹ ಅಪ್ರತಿಮ ಹೋರಾಟಗಾರ ಹೇಸ್ ಸೇರಿದಂತೆ, ಕ್ರೆಡಲ್ ಟು ಕ್ರೆಡಲ್ ಸಂಸ್ಥೆಯನ್ನು ಪ್ರಾರಂಭಿಸಿದ ವಿಲಿಯಮ್ ಮೆಕ್‍ಡೊನಾ, ಎನರ್ಜಿ ಫಾರ್ ಆಲ್ ನ ಜಿಮ್ ವಾಕರ್ ಅವರಂತಹ ವಿಶ್ವಮಟ್ಟದ ಪರಿಸರ ಹೋರಾಟಗಾರರೊಂದಿಗೆ ಸೆಲ್ಕೋ ಸಂಸ್ಥೆಯು ಭೂ ದಿನದ ಪ್ರಯುಕ್ತ ವೆಬಿನಾರ್‌ಗಳನ್ನು ನಡೆಸುತ್ತಿದೆ.
ಮುಂದಿನ ದಿನಗಳಲ್ಲಿ ಉಂಟಾಗಲಿರುವ ಹವಾಮಾನ ಬಿಕ್ಕಟ್ಟಿನ ಕುರಿತು ನಾವೀಗ ಕೈಗೊಳ್ಳಲೇಬೇಕಾಗಿರುವ ತುರ್ತು ಕ್ರಮಗಳ ಅಗತ್ಯವನ್ನು, ಕಳೆದ ಬಾರಿ ಸಂಸ್ಥೆಯೊಂದಿಗೆ ನಡೆಸಿದ ಸಂವಾದದಲ್ಲಿ ಡೆನಿಸ್ ಹೇಸ್ ಪ್ರತಿಪಾದಿಸಿದರು.
ಪರಿಸರಕ್ಕೆ ಪೂರಕವಾದ ಅಭಿಯಾನವನ್ನು ಕೈಗೊಂಡಾಗ ಹೇಸ್ ಅವರಿಗೆ ಏಕಾಏಕಿ ಅಭೂತಪೂರ್ವ ಬೆಂಬಲ ದೊರಕಲಿಲ್ಲ. ಪ್ರಾರಂಭದಲ್ಲಿ ಅವರು 85 ಜನರ ಒಂದು ತಂಡವನ್ನು ಕಟ್ಟಿದರು. ಅದುವರೆಗೆ ತೈಲ ಸೋರಿಕೆ, ಕಾರ್ಖಾನೆಗಳು, ವಿದ್ಯುತ್ ಸ್ಥಾವರಗಳು, ಕೊಳಚೆನೀರು, ರಾಸಾಯನಿಕ, ಗಾಳಿ– ನೀರಿನ ಮಾಲಿನ್ಯದ ವಿರುದ್ಧ ವೈಯಕ್ತಿಕವಾಗಿ ಹೋರಾಡುತ್ತಿದ್ದವರೆಲ್ಲ ಅಂದು ಒಂದಾದರು. 1970 ರ ಅಂತ್ಯದ ವೇಳೆಗೆ ಮೊದಲ ಭೂ ದಿನವು ಯುನೈಟೆಡ್ ಸ್ಟೇಟ್ಸ್ ಎನ್‍ವಿರಾನ್‍ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ರಚನೆಗೆ ಮತ್ತು ಶುದ್ಧಗಾಳಿ ಕಾಯ್ದೆಯ ಅಂಗೀಕಾರಕ್ಕೆ ಕಾರಣವಾಯಿತು. ಎರಡು ವರ್ಷಗಳ ನಂತರ, ಸ್ವಚ್ಛ ನೀರಿನ ಕಾಯ್ದೆ ಹಾಗೂ ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಾಯ್ದೆಗೆ ಅಂಗೀಕಾರ ದೊರೆಯಿತು ಎಂಬುದು ಇಲ್ಲಿ ಗಮನಾರ್ಹ.
ಇಷ್ಟಾಗಿಯೂ 1990 ರವರೆಗೂ ಭೂ ದಿನದ ಚಿಂತನೆಗಳು ಅಷ್ಟೇನೂ ಪ್ರಚಾರಕ್ಕೆ ಬಂದಿರಲಿಲ್ಲ. 1990 ರಲ್ಲಿ 141 ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ಜಾಗತಿಕ ವೇದಿಕೆಯಲ್ಲಿ ಈ ಚಿಂತನೆಗಳ ಮಹತ್ವವನ್ನು ಮನದಟ್ಟು ಮಾಡಲಾಯಿತು. 2010 ರ ವೇಳೆಗೆ ಇದು, ವಿಶ್ವ ನಾಯಕರಿಗೆ ಪರಿಸರದ ಕುರಿತು ಸಂದೇಶವನ್ನು ಕಳುಹಿಸುವ ದಿನವಾಗಿ ರೂಪುಗೊಂಡಿತು.
‘ಹವಾಮಾನ ಬದಲಾವಣೆಯು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ಜನರು ಸಾರ್ವಜನಿಕ ಸಾರಿಗೆಗೆ ಬದಲಾಗಿ ಖಾಸಗಿ ಕಾರು, ಹೆಲಿಕಾಪ್ಟರ್‌ಗಳನ್ನು ಬಳಸುತ್ತಾ ಹೋದರೆ ದೊಡ್ಡ ಅಪಾಯಕ್ಕೆ ನಾವು ತೆರೆದುಕೊಳ್ಳುತ್ತೇವೆ’ ಎಂದು ಎಚ್ಚರಿಸುತ್ತಾರೆ ಹೇಸ್.
‘ನಾವು ಭೂ ದಿನದ ಅಭಿಯಾನವನ್ನು ಕೈಗೊಂಡಾಗ ಅಲ್ಲಿ ಜಾತಿ, ಬಣ್ಣ, ವರ್ಗಗಳೆಂಬ ಯಾವ ಭೇದವೂ ಇರಲಿಲ್ಲ. ಆದರೆ ಈಗ ಜಗತ್ತಿನಲ್ಲಿ ಹಲವು ಬದಲಾವಣೆಗಳ ನಂತರ ಬಡವ ಬಲ್ಲಿದರ ನಡುವೆ ಬಹುದೊಡ್ಡ ಅಂತರ ಸೃಷ್ಟಿಯಾಗುತ್ತಿದೆ. ಕೂಲಿಕಾರ್ಮಿಕರು, ರೈತರು, ಬಡವರೆಲ್ಲ ಬೀದಿಗೆ ಬರುವಂತಾಗಿದೆ. ಬಡವರು ಯಾವತ್ತೂ ಪಾಲುದಾರರೇ ಹೊರತು ಫಲಾನುಭವಿಗಳಲ್ಲ ಎಂಬಂತೆ, ಪ್ರತಿ ಸಂಘ ಸಂಸ್ಥೆಯೂ ಸರ್ಕಾರವೂ ಸಮುದಾಯವನ್ನು ಭಾಗಿಯಾಗಿಸಿಕೊಂಡು ಕೆಲಸ ಮಾಡಬೇಕು. 2030 ಕ್ಕೆ ವಿಶ್ವಸಂಸ್ಥೆ ನಿಗದಿಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಯನ್ನು (ಎಸ್‍ಡಿಜಿ) ತಲುಪಬೇಕಾದರೆ ಇಡೀ ವಿಶ್ವವು ಒಂದು ಧ್ವನಿಯಾಗಿ ಹೊರಹೊಮ್ಮಬೇಕು’ ಎನ್ನುತ್ತಾರೆ ಅವರು.
1970 ರಲ್ಲಿ ಕಂಡುಬಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟಗಳು ಈಗ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ಗ್ರೇತಾ ಥನ್‍ಬರ್ಗ್‌ರಂತಹ ಯುವಜನ, ಹವಾಮಾನ ಬದಲಾವಣೆ ಕುರಿತು ದಿಟ್ಟವಾಗಿ ಅಭಿಯಾನ ಕೈಗೊಳ್ಳುವಂತೆ ಆಗಿದೆ. ‘ಒಂದು ಭೂಮಿ, ಒಂದು ಪರಿಸರ, ಒಂದು ಮಾನವಕೋಟಿ’ ಎಂಬ ಧ್ವನಿ ವಿಶ್ವದಾದ್ಯಂತ ಮೊಳಗಬೇಕಾದ ಅಗತ್ಯ ಈಗ ಹೆಚ್ಚಾಗಿದೆ. ಹೀಗಾದಾಗ ಮಾತ್ರ, ವಿಶ್ವ ಭೂ ದಿನದ ಅಭಿಯಾನವನ್ನು ವಿಶ್ವ ಮಟ್ಟದಲ್ಲಿ ಕೈಗೊಂಡ ಹೇಸ್ ಅಂತಹವರ ಹೋರಾಟಕ್ಕೆ ಒಂದು ಅರ್ಥ ಬರುತ್ತದೆ.
No comments:
Post a Comment