Saturday, March 23, 2024

25-03-2024 26 Marks Possible Question Answers on First Language Kannada Subject...

  Wisdom News       Saturday, March 23, 2024
Hedding ; 25-03-2024 26 Marks Possible Question Answers on First Language Kannada Subject...


SSLC ಮಕ್ಕಳೇ ಓದುವುದು ಹೇಗೆ ಮತ್ತು ಅದರ ಕ್ರಮಗಳು:*

ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸುವುದು ಆದರ್ಶ ವಿದ್ಯಾರ್ಥಿಯ ಲಕ್ಷಣ. ಒಂದು ವೇಳೆ ಅದು ಸಾಧ್ಯವಾಗಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದು ಎದೆಗುಂದುವ ಅಗತ್ಯವಿಲ್ಲ. ಈಗಲೂ ತಡವಾಗಿಲ್ಲ. ಪ್ರಸ್ತುತ ಉಳಿದಿರುವ ಸಮಯದಲ್ಲಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿದಲ್ಲಿ ಖಂಡಿತಾ ಯಶಸ್ಸು ಗಳಿಸಬಹುದು. ಇಲ್ಲಿ ಹೇಳಲಾಗಿರುವ ಕೆಲವು ಸೂತ್ರಗಳನ್ನು ಪಾಲಿಸಿದಲ್ಲಿ ಪರೀಕ್ಷಾ ಭಯದಿಂದ ದೂರಾಗಬಹುದು.

*1. ವೇಳಾಪಟ್ಟಿ ರೂಪಿಸಿಕೊಳ್ಳಿ.*

ವಾರದಲ್ಲಿ ಏಳು ದಿನಗಳಿವೆ. ನೀವು ಅಧ್ಯಯನ ಮಾಡಬೇಕಾಗಿರುವ ವಿಷಯಗಳನ್ನು ಈ ದಿನಗಳಿಗೆ ಹಂಚಿ ಒಂದು ವೇಳಾಪಟ್ಟಿ ರಚಿಸಿಕೊಳ್ಳಿ. ಭಾಷೆ ಹಾಗೂ ಐಚ್ಛಿಕ ವಿಷಯಗಳಿಗೆ ತಲಾ ಒಂದು ದಿನ ಮೀಸಲಿಡಿ. ಈ ವೇಳಾಪಟ್ಟಿಯನ್ನು ನಿಮ್ಮ ಪೋಷಕರಿಗೆ ತೋರಿಸಿ, ಅವರ ಸಲಹೆ ಪಡೆದುಕೊಳ್ಳಿ. ಅವಶ್ಯವೆನಿಸಿದರೆ, ನಿಮ್ಮ ಶಿಕ್ಷಕರ ಮಾರ್ಗದರ್ಶನ ಪಡೆಯಿರಿ. ದಿನಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡಿ. ವೇಳಾಪಟ್ಟಿಯನ್ನು ನೀವು ಅಧ್ಯಯನ ಮಾಡುವ ಜಾಗದಲ್ಲಿ ಎದ್ದು ಕಾಣುವಂತೆ ತೂಗುಹಾಕಿ. ಇದರಿಂದಾಗಿ ಗುರಿ ಕಣ್ಣೆದುರೇ ಇರುತ್ತದೆ, ನೆನಪಿನಲ್ಲಿ ಉಳಿಯುತ್ತದೆ. ವ್ಯವಸ್ಥಿತ ಅಧ್ಯಯನಕ್ಕೆ ವೇಳಾಪಟ್ಟಿ ಅತ್ಯಂತ ಅವಶ್ಯಕ.

*2. ಅಧ್ಯಯನಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡಿ.*

ಅಧ್ಯಯನಕ್ಕೆ ಪ್ರತ್ಯೇಕ ಕೊಠಡಿ ಇದ್ದರೆ ಅನುಕೂಲ. ಇಲ್ಲವಾದಲ್ಲಿ, ಇರುವ ಸ್ಥಳಾವಕಾಶದಲ್ಲಿಯೇ ಸದ್ದು–ಗದ್ದಲಗಳಿಂದ ದೂರವಿರುವ ಜಾಗವೊಂದನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಸಾಕಷ್ಟು ಗಾಳಿ, ಬೆಳಕು ಇರಬೇಕು. ಮೇಜು ಹಾಗೂ ಒಂದು ಕುರ್ಚಿಯನ್ನು ಹೊಂದಿಸಿಕೊಳ್ಳಿ. ಓದಲು ಅಗತ್ಯವಾದ ಎಲ್ಲ ಅಧ್ಯಯನ ಸಾಮಗ್ರಿಗಳನ್ನು, ( ಪಠ್ಯಪುಸ್ತಕ, ಪಾಠದ ಟಿಪ್ಪಣಿ, ಖಾಲಿ ಹಾಳೆಗಳು, ಪೆನ್, ಪೆನ್ಸಿಲ್ ಇತ್ಯಾದಿ.) ಅಲ್ಲಿ ಒಪ್ಪವಾಗಿ ಜೋಡಿಸಿಟ್ಟುಕೊಳ್ಳಿ.

*3. ಅಧ್ಯಯನದ ಸಮಯ.*

ಬೆಳಿಗ್ಗೆ 4ರಿಂದ 7ರ ಸಮಯ ಅಧ್ಯಯನಕ್ಕೆ ಪ್ರಶಸ್ತವಾದುದು. ರಾತ್ರಿಯ ನಿದ್ರೆಯ ಕಾರಣ ಬೆಳಗಿನ ಸಮಯದಲ್ಲಿ ಮೆದುಳಿಗೆ ಸಾಕಷ್ಟು ವಿಶ್ರಾಂತಿ ದೊರೆತಿರುತ್ತದೆ. ಇದು ವಿಷಯ ಗ್ರಹಿಕೆಗೆ ಹಾಗೂ ಓದಿದ್ದನ್ನು ನೆನಪಿಟ್ಟುಕೊಳ್ಳುವುದಕ್ಕೆ ಅತ್ಯಂತ ಸಹಾಯಕ.
ಸಂಜೆಯೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ. ಸಾಧ್ಯವಾದಷ್ಟೂ ರಾತ್ರಿ ನಿದ್ದೆಗೆಟ್ಟು ಓದುವುದನ್ನು ತಪ್ಪಿಸಿ. ಮೈ–ಮನಸಿಗೆ ಅಗತ್ಯವಾದಷ್ಟು ನಿದ್ದೆ ಮಾಡುವುದು ಕೂಡ ಒಳ್ಳೆಯ ಓದಿಗೆ ಸಹಕಾರಿ.



*4. ಸ್ಪಷ್ಟ ಗುರಿಯಿರಲಿ.*

ನಿಮ್ಮ ಸಾಧನೆಗೆ ಒಂದು ನಿರ್ದಿಷ್ಟ ಗುರಿಯನ್ನು ಹಾಕಿಕೊಳ್ಳಿ. ಆ ಗುರಿ ನೈಜವಾಗಿರಬೇಕು, ಸಾಧಿಸುವಂತಿರಬೇಕು ಮತ್ತು ಕಾಲಮಿತಿಗೆ ಒಳಪಟ್ಟಿರಬೇಕು. ಗುರಿಯನ್ನು ತಲುಪುವ ಬಗ್ಗೆ ದೃಢ ಸಂಕಲ್ಪ ಮಾಡಿಕೊಳ್ಳಿ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಆಲೋಚನೆಗಳು ಧನಾತ್ಮಕವಾಗಿರಲಿ. ಅತಿಯಾದ ಆತ್ಮವಿಶ್ವಾಸ ಬೇಡ. ಹಾಗೆಯೇ ಕೀಳರಿಮೆಯೂ ಬೇಡ.
ಅನವಶ್ಯಕ ವಿಷಯಗಳಿಂದ ದೂರವಿದ್ದಷ್ಟೂ ಗುರಿ ಸಾಧನೆಗೆ ನೀವು ಹತ್ತಿರವಾಗುತ್ತೀರಿ.

*5. ವಿಷಯದ ಆಯ್ಕೆ.*

ನೀವೇ ಸಿದ್ಧಪಡಿಸಿಕೊಂಡಿರುವ ವೇಳಾಪಟ್ಟಿಯ ಪ್ರಕಾರ ಆಯಾ ದಿನದ ಅಧ್ಯಯನಕ್ಕೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಲು ಪ್ರಾರಂಭಿಸಿ. ಅದಕ್ಕೆ ಮುನ್ನ ನೀವು ಕುಳಿತ ಜಾಗದಲ್ಲಿಯೇ ಕೆಲವು ನಿಮಿಷಗಳ ಕಾಲ ಕಣ್ಣು ಮುಚ್ಚಿಕೊಳ್ಳಿ. ನಾಲ್ಕೈದು ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಕೆಲವು ಸೆಕೆಂಡುಗಳ ಕಾಲ ವಿರಮಿಸಿ. ಈಗ ಮೈ–ಮನ ಹಗುರಗೊಂಡು ಅಧ್ಯಯನಕ್ಕೆ ಅಗತ್ಯವಾದ ಏಕಾಗ್ರತೆ ಲಭ್ಯವಾಗುತ್ತದೆ. ನಂತರ ಓದಲು ಪ್ರಾರಂಭಿಸಿ.



*ಅಧ್ಯಯನದ ವಿಧಾನ ಹೇಗೆ?*

ನೀವು ಓದಲು ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದ ಘಟಕ, ಅಧ್ಯಾಯ ಹಾಗೂ ಉಪವಿಭಾಗಗಳನ್ನು ಗುರುತಿಸಿಕೊಳ್ಳಿ. ವಿಷಯದ ಬಗ್ಗೆ ನಿಮಗೆ ಈ ಹಿಂದಿನ ಓದಿನಿಂದ ಈಗಾಗಲೇ ತಿಳಿದಿರುವ ಮಾಹಿತಿಯನ್ನು ನೆನಪಿಗೆ ತಂದುಕೊಳ್ಳಿ. ಇಂದು ಯಾವ ಅಧ್ಯಾಯ ಅಥವಾ ಉಪವಿಭಾಗವನ್ನು ಓದಬೇಕೆಂಬುದನ್ನು ನಿರ್ಧರಿಸಿಕೊಳ್ಳಿ. ಓದುತ್ತಿದ್ದಂತೆ ಅದರಲ್ಲಿರುವ ಮಾಹಿತಿಯನ್ನು ನಿಮ್ಮದೇ ಆದ ಪದಗಳಲ್ಲಿ ಅರ್ಥ ಮಾಡಿಕೊಳ್ಳಿ. ಎರಡು, ಮೂರು ಬಾರಿ ಓದಿ ಪುನರ್ ಮನನ ಮಾಡಿಕೊಳ್ಳಿ. ಓದುವಾಗಲೇ ಪುಟ್ಟ ಟಿಪ್ಪಣಿಗಳನ್ನು ಮಾಡಿಕೊಳ್ಳುವುದರಿಂದ, ಓದಿದ ವಿಷಯ ನೆನಪಿನಲ್ಲಿರುತ್ತದೆ.
ಪ್ರತಿ ಒಂದು ಗಂಟೆ ಅಭ್ಯಾಸದ ನಂತರ ಐದರಿಂದ ಹತ್ತು ನಿಮಿಷಗಳ ವಿಶ್ರಾಂತಿ ಪಡೆಯಿರಿ. ಬೇಸರವಾದಲ್ಲಿ, ವಿಷಯ ಅಥವಾ ಅಧ್ಯಾಯವನ್ನು ಬದಲಾಯಿಸಿಕೊಳ್ಳಿ. ಇಲ್ಲವೇ, ಹತ್ತು ನಿಮಿಷಗಳ ಕಾಲ ಜೋರಾಗಿ ದನಿಯೆತ್ತರಿಸಿ ಓದಿ. ಒಂದರಿಂದ ನೂರರವರೆಗೆ ಇಲ್ಲವೇ ನೂರರಿಂದ ಒಂದರವರೆಗೆ ಹಿಮ್ಮುಖವಾಗಿ ಎಣಿಸಿ, ಮತ್ತೆ ಅಭ್ಯಾಸ ಪ್ರಾರಂಭಿಸಿ.

ಕ್ಲಿಷ್ಟಕರ ಎನಿಸಿದ ವಿಷಯಗಳಿಗೆ, ಅಧ್ಯಾಯಗಳಿಗೆ ಹೆಚ್ಚಿನ ಸಮಯವನ್ನು ನಿಗದಿಪಡಿಸಿಕೊಳ್ಳಿ. ಭಾನುವಾರಗಳಂದು ದೊರಕುವ ಹೆಚ್ಚಿನ ಸಮಯವನ್ನು ಇಂಥ ವಿಷಯಗಳಿಗೆ ಮೀಸಲಿಡಿ.

ಒಂದು ಅಧ್ಯಾಯ ಅಥವಾ ಉಪವಿಭಾಗವನ್ನು ಅಧ್ಯಯನ ಮಾಡಿದ ಮೇಲೆ ಖಾಲಿ ಹಾಳೆಯೊಂದರಲ್ಲಿ ಅದಕ್ಕೆ ಸಂಬಂಧಿಸಿದ ಸಾರಾಂಶವನ್ನು ಬರೆದುಕೊಳ್ಳಿ. ಹೀಗೆ ಮಾಡುವಾಗ ಪೂರ್ತಿಯಾಗಿ ವಾಕ್ಯಗಳನ್ನು ಬರೆಯುವ ಬದಲಿಗೆ ಮುಖ್ಯ ಪದಗಳನ್ನು ಮಾತ್ರ ಬರೆದುಕೊಳ್ಳಿ. ಇದೇ ವಿಷಯವನ್ನು ಮತ್ತೆ ಓದುವ ಮುನ್ನ ಈ ಟಿಪ್ಪಣಿಯನ್ನೊಮ್ಮೆ ಪೂರ್ತಿಯಾಗಿ ಅವಲೋಕಿಸಿ, ಮುಂದಕ್ಕೆ ಹೋಗಿ.
ಪ್ರತೀ ವಿಷಯದ ಪ್ರತಿ ಅಧ್ಯಾಯಕ್ಕೆ ಹೀಗೆ ನೀವು ಮಾಡಿಕೊಳ್ಳುವ ಸಾರಾಂಶದ ಹಾಳೆಗಳನ್ನು ಒಂದು ಫೈಲ್‌ನಲ್ಲಿ ಹಾಕಿ ಇಟ್ಟುಕೊಳ್ಳಿ. ಪರೀಕ್ಷೆಯ ಹಿಂದಿನ ದಿನಗಳಲ್ಲಿ ಪುನರ್‌ಮನನ ಮಾಡಿಕೊಳ್ಳಲು ಇದು ಉಪಯುಕ್ತ.

ಸಿದ್ಧತೆಯಲ್ಲಿ ನಿಮಗೆ ಸಹಾಯಕವಾಗಬಲ್ಲ ಸಹಪಾಠಿಗಳನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಿ. ಇಂದು ನೀವು ಓದಿದ ಅಧ್ಯಾಯದ ಬಗ್ಗೆ ಮಾರನೆಯ ದಿನ ಅವರೊಂದಿಗೆ ಚರ್ಚಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ವಿಷಯದ ಬಗ್ಗೆ ಗೊಂದಲಗಳಿದ್ದಲ್ಲಿ ಪರಿಹರಿಸುತ್ತದೆ.



*6. ಓದುವಾಗ ಏಕಾಗ್ರತೆ ಇರಲಿ.*


ಓದಿದ ವಿಷಯ ಅರ್ಥವಾಗಿ ನೆನಪಿನಲ್ಲಿ ಉಳಿಯಬೇಕಾದರೆ, ಓದಿನಲ್ಲಿ ಏಕಾಗ್ರತೆ ಅತ್ಯಂತ ಅವಶ್ಯಕ. ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಆಕರ್ಷಣೆಗಳಿಂದ ದೂರವಿರಿ. ಓದುವ ಸಮಯದಲ್ಲಿ ಮೊಬೈಲ್ ಫೋನಿನ ಬಳಕೆ ಮಾಡುವುದಾಗಲೀ, ಸ್ನೇಹಿತರ ಜೊತೆಗೆ ಚಾಟ್ ಮಾಡುವುದಾಗಲೀ ಖಂಡಿತಾ ಸಲ್ಲದು.

ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನ ಕನಿಷ್ಠ ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ಯೋಗ, ಪ್ರಾಣಾಯಾಮ, ಧ್ಯಾನ, ಮುಂತಾದ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು.

*7. ನಿದ್ರೆ, ಆಹಾರದ ನಿರ್ಲಕ್ಷ್ಯ ಬೇಡ.*

ನಿದ್ರೆಗೆಟ್ಟು ರಾತ್ರಿಯೆಲ್ಲಾ ಓದುವುದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ಆರರಿಂದ ಎಂಟು ತಾಸಿನ ನಿದ್ರೆ ನಿಮಗೆ ಅವಶ್ಯಕ. ಹಸಿದುಕೊಂಡು ಓದಲು ಕೂರಬೇಡಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಬಹಳ ಮುಖ್ಯ. ಈ ದಿನಗಳಲ್ಲಿ ನಿಮಗೆ ಸಮತೋಲಿತ ಆಹಾರ ಅತ್ಯವಶ್ಯ. ದಿನಕ್ಕೆ ಐದಾರು ಲೋಟಗಳಷ್ಟು ನೀರು ಕುಡಿಯಿರಿ.

*ಎಲ್ಲಾ ಮಕ್ಕಳಿಗೆ ಒಳ್ಳೆಯದಾಗಲಿ* 
👍👍👍🤝🤝


ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಘಟ್ಟಕ್ಕೆ ಬಂದು ವಿದ್ಯಾರ್ಥಿಗಳು ತಲುಪಿದ್ದಾರೆ. ವಾರ್ಷಿಕ ಪರೀಕ್ಷೆಗಳ ಭರಾಟೆ ಆರಂಭಗೊಂಡಿದೆ. ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಂತೂ ತಮ್ಮ ಪಬ್ಲಿಕ್‌ ಪರೀಕ್ಷೆಯ ಬಗೆಗೆ ಸಹಜವಾಗಿಯೇ ತುಸು ಆತಂಕದಲ್ಲಿದ್ದಾರೆ. ಆದರೆ ಎಲ್ಲ ತರಗತಿಗಳಲ್ಲಿ ಎದುರಿಸಿದ ಪರೀಕ್ಷೆಯಂತೆ ಇದೂ ಕೂಡ ಒಂದು ಎಂಬ ಮನೋಭಾವದೊಂದಿಗೆ ಪರೀಕ್ಷೆಗೆ ಸಮರ್ಪಕ ತಯಾರಿ, ಅಧ್ಯಯನ ನಡೆಸಿದರೆ ಈ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಬಲು ಸುಲಭ. ಪರೀಕ್ಷೆ ತಯಾರಿ, ಪರೀಕ್ಷೆಯನ್ನು ಬರೆಯುವ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನಹರಿಸಿ ಅತ್ಮಸ್ಥೈರ್ಯವನ್ನು ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಮಾನಸಿಕ ಆರೋಗ್ಯ ತಜ್ಞರು ವಿದ್ಯಾರ್ಥಿಗಳು ಮತ್ತವರ ಹೆತ್ತವರಿಗೆ ನೀಡಿರುವ ಕೆಲವೊಂದು ಸಲಹೆಗಳು ಇಲ್ಲಿವೆ.

ಪರೀಕ್ಷೆ’ ಎಂಬುದು ಜೀವನದ ಒಂದು ಭಾಗ. ನಾವೆಲ್ಲರೂ ಜೀವನದಲ್ಲಿ ಒಂದೊಂದು ಪರೀಕ್ಷೆ ಎದುರಿಸಲೇಬೇಕು. ಹೀಗಾಗಿ ಪರೀಕ್ಷೆ ಎಂಬ ಶಬ್ದವೇ ಸಾಮಾನ್ಯವಾಗಿ ನಮ್ಮಲ್ಲಿ ಆತಂಕ-ಭಯ ಹುಟ್ಟಿಸುತ್ತದೆ. ಇತ್ತೀಚೆಗೆ ಮಕ್ಕಳಲ್ಲಿ ಪರೀಕ್ಷೆ ಎಂಬ ಆತಂಕ ಕಾಣಿಸಿಕೊಳ್ಳುತ್ತಿದೆ.

ಪರೀಕ್ಷೆಯ ಬಗ್ಗೆ ಸ್ವಲ್ಪ ಮಟ್ಟಿನ ಆತಂಕ ಇರಬೇಕು. ಆತಂಕ ಇದ್ದರೆ ಮಾತ್ರ ಓದಲು ಪ್ರೇರಣೆ ಸಿಗುತ್ತದೆ. ಆತಂಕವಿಲ್ಲದಿದ್ದರೆ ಏನೂ ಆಗದು. ಆದರೆ ಆತಂಕ ಯಾವತ್ತಿಗೂ ಕೂಡ ಅತಿಯಾಗಿರಬಾರದು. ಒಂದು ವೇಳೆ ಅತಿ ಯಾದ ಆತಂಕಕ್ಕೊಳಗಾದರೆ ವಿದ್ಯಾರ್ಥಿಯ ಕಲಿಕೆ, ಪರೀಕ್ಷೆ ಹಾಗೂ ಫಲಿತಾಂಶದ ಮೇಲೆ ಅದು ಪರಿಣಾಮ ಬೀರುತ್ತದೆ.

ಪರೀಕ್ಷೆ ಇನ್ನು ಕೆಲವೇ ದಿನ ಇರುವುದರಿಂದ “ಓದಿಲ್ಲ’ ಎಂಬ ಭಯ ವಿದ್ಯಾರ್ಥಿಗಳಲ್ಲಿ ಇರಕೂಡದು. ಬದಲಾಗಿ ಇಲ್ಲಿಯವರೆಗೆ ಎಷ್ಟು ಓದಿದ್ದಾರೋ ಅದನ್ನು ಮಾತ್ರ ಮತ್ತೆ ಮತ್ತೆ ಓದಿ, ಮನನ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಕೊನೆಯ ಹಂತದಲ್ಲಿರುವ ಕಾರಣದಿಂದ ಹೊಸ ಓದು ಮತ್ತಷ್ಟು ಆತಂಕ ತರಿಸಬಹುದು.

ಪರೀಕ್ಷಾ ತಯಾರಿ ಹೀಗಿರಲಿ
ಪರೀಕ್ಷೆಯ ಮುನ್ನಾ ದಿನ ಮಕ್ಕಳು ಕನಿಷ್ಠ 6 ಗಂಟೆ ನಿದ್ದೆ ಮಾಡಲೇಬೇಕು. ಶೇ.60 ರಷ್ಟು ಮಕ್ಕಳು ಪರೀಕ್ಷೆಯ ಮುನ್ನಾ ದಿನ ನಿದ್ದೆ ಮಾಡುವುದಿಲ್ಲ. ಬದಲಾಗಿ ರಾತ್ರಿಯವರೆಗೆ ಕುಳಿತು ಓದುತ್ತಾರೆ. ಇದು ಮರು ದಿನದ ಪರೀಕ್ಷೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ಅವರಲ್ಲಿ ಒತ್ತಡ ಅಧಿಕ ವಾಗುತ್ತದೆ. ಜತೆಗೆ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯ ದಿನ ಏನೂ ತಿನ್ನುವುದಿಲ್ಲ. ಇದು ಮತ್ತೂಂದು ಸಮಸ್ಯೆಗೆ ಕಾರಣವಾಗುತ್ತದೆ. ಬದಲಾಗಿ ಲಘು ಆಹಾರ ಸೇವಿಸಲೇಬೇಕು.

ಪರೀಕ್ಷೆಯ ಮುನ್ನ ಸಕಾರಾತ್ಮಕ ಭಾವನೆ ಯನ್ನು ಬೆಳೆಸಿಕೊಳ್ಳಬೇಕು. ಮನನ ಮಾಡಿ ಕೊಳ್ಳಬೇಕು. ಇದರ ಮೂಲಕ ಆತ್ಮಸ್ಥೈರ್ಯ ಬೆಳೆಸುವ ಪ್ರಯತ್ನ ಮಕ್ಕಳು ರೂಢಿಸಿಕೊಂಡರೆ ಉತ್ತಮ. ಪರೀಕ್ಷೆಗೆ ಒಂದು ವಾರ ಬಾಕಿ ಉಳಿದಿರುವಾಗಲೇ ಆರಾಮವಾಗಿರಲು ಮಕ್ಕಳು ನಿಯಮಿತವಾಗಿ ಉಸಿರಾ ಟದತ್ತ ಗಮನ ಕೇಂದ್ರೀಕರಿಸಿ ವ್ಯಾಯಾಮ ಮಾಡಿದರೆ ಉತ್ತಮ. ಇದರಿಂದಾಗಿ ದೇಹ ಹಾಗೂ ಮನಸ್ಸು ಶಾಂತವಾಗುತ್ತದೆ. ಇದು ನೆನಪಿನ ಶಕ್ತಿವೃದ್ಧಿಯಾಗಲು ಸಹಕಾರಿ.

ಪರೀಕ್ಷೆಗೂ ಮುನ್ನ ಪರೀಕ್ಷೆಯ ಬಗ್ಗೆ ಮಾತ್ರ ಗಮನಹರಿಸಬೇಕು. ಫಲಿತಾಂಶದ ಬಗ್ಗೆ ಅಲ್ಲ. ಚೆನ್ನಾಗಿ ಗೊತ್ತಿರುವ ಪ್ರಶ್ನೆಗೆ ಮೊದಲು ಉತ್ತರಿಸಿ, ಸ್ವಲ್ಪ ಗೊತ್ತಿರುವ ಪ್ರಶ್ನೆಗೆ ಮತ್ತೆ ಉತ್ತರಿಸುವ ಶೈಲಿ ಸಾಧ್ಯವಾದರೆ ಬೆಳೆಸಿಕೊಳ್ಳಿ. ಬಹುಮುಖ್ಯವಾಗಿ ಪ್ರಶ್ನೆಗಳು “ಕಷ್ಟ’ ಎಂಬ ಬಗ್ಗೆ ಗಾಬರಿಯಾಗಬೇಡಿ.

ಪರೀಕ್ಷೆ ಬಳಿಕ ಚರ್ಚೆ ಬೇಡ!
ಪರೀಕ್ಷೆಯ ಬಳಿಕ ಕೆಲವು ವಿದ್ಯಾರ್ಥಿಗಳು ಇತರ ಮಕ್ಕಳ ಜತೆಗೆ ಪ್ರಶ್ನೆ-ಉತ್ತರದ ಬಗ್ಗೆ ಚರ್ಚೆ ಮಾಡುತ್ತಾರೆ. ಒಂದು ವೇಳೆ ಆತಂಕ ಇರುವ ಮಕ್ಕಳಿಗೆ ಇಂತಹ ಚರ್ಚೆಯಿಂದಾಗಿ ತಾವು ತಪ್ಪು ಬರೆದಿದ್ದರೆ ಅಥವಾ ಉತ್ತರ ಗೊತ್ತಿದ್ದೂ ಬರೆಯದಿದ್ದರೆ ಆತಂಕ ಮತ್ತಷ್ಟು ಹೆಚ್ಚಾಗಬಹುದು. ಇದರಿಂದ ಮುಂದಿನ ಪರೀಕ್ಷೆಯ ತಯಾರಿ, ಓದಿನ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಆ ಪರೀಕ್ಷೆಯ ವಿಚಾರವನ್ನು ಮರೆತು ಬಿಡಿ; ಬದಲಾಗಿ ಮುಂದಿನ ಪರೀಕ್ಷೆ ಬಗ್ಗೆ ಮಾತ್ರ ನಿಮ್ಮ ಗಮನವನ್ನೆಲ್ಲ ಕೇಂದ್ರೀಕರಿಸಿ.

ಪರೀಕ್ಷೆ ನೆಲೆಯಲ್ಲಿ ವಿದ್ಯಾರ್ಥಿಗಳು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇತ್ತ ಹೆಚ್ಚಿನ ಲಕ್ಷ್ಯ ಹರಿಸುವುದು ಅತೀ ಮುಖ್ಯ ಜತೆಯಲ್ಲಿ ಮಾನಸಿಕ ಆರೋಗ್ಯ ಚೆನ್ನಾಗಿರ ಬೇಕು. ಕಲಿಕೆಯ ಮಧ್ಯೆ ಐದು ನಿಮಿಷ ಗಳ ರಿಲ್ಯಾಕ್ಸ್‌ ತೆಗೆದುಕೊಳ್ಳುವುದು ಉತ್ತಮ. ರಿಲ್ಯಾಕ್ಸ್‌ ವೇಳೆ ಟಿವಿ, ಮೊಬೈಲ್‌ ದಾಸರಾಗು ವುದಲ್ಲ. ಒಂದು ವೇಳೆ ಮಕ್ಕಳಿಗೆ ಏನೇ ಸಮಸ್ಯೆ ಇದ್ದರೆ ಹೆತ್ತವರಲ್ಲಿ ಮಾತನಾಡಿ ಹಾಗೂ ಅವರು ಕೂಡ ಮಕ್ಕಳ ಜತೆಗೆ ಪರೀಕ್ಷಾ ಸಮಯ
ದಲ್ಲಿ ಹೆಚ್ಚು ಮಾತನಾಡಿ, ಧೈರ್ಯ ತುಂಬಿ.

ಫಲಿತಾಂಶದ ಬಗ್ಗೆ ಆಲೋಚನೆ ಬೇಡ; ನನ್ನ ಉತ್ತರಪತ್ರಿಕೆಯನ್ನು ಯಾರು ತಿದ್ದುತ್ತಾರೋ ಎಂಬ ಬಗ್ಗೆ ಯೋಚಿಸಬೇಡಿ- ಬದಲಾಗಿ ಪರೀಕ್ಷೆ ಬರೆಯುವುದು ಮಾತ್ರ ನಮ್ಮ ಕರ್ತವ್ಯ ಎಂಬುದು ಮಕ್ಕಳ ನೆನಪಿನಲ್ಲಿರಲಿ.
ಅಂತೂ, ಫಲಿತಾಂಶ ಏನೇ ಇರಲಿ; ಅದನ್ನು ಸ್ವೀಕರಿಸಲೇಬೇಕು. ಯಾಕೆಂದರೆ ಈ ಪರೀಕ್ಷೆಯ ಫಲಿತಾಂಶ ನಿಮ್ಮ ಜೀವನವನ್ನು ವರ್ಣಿಸುವುದಿಲ್ಲ. ಬದಲಾಗಿ ಈ ಪರೀಕ್ಷೆಯಲ್ಲಿ ಮಾತ್ರ ಹೇಗೆ ಫಲಿತಾಂಶ ಇದೆ ಎಂಬುದನ್ನು ಮಾತ್ರ ಹೇಳುತ್ತದೆ. ಜೀವನದ ಪರೀಕ್ಷೆ ಮುಂದೆಯೂ ಇದೆ!

ಎಸೆಸೆಲ್ಸಿ ಟಿಪ್ಸ್‌
– ಆತಂಕ ಸಹಜ, ಆದರೆ ಅತಿಯಾದ ಆತಂಕ ಪಡುವ ಅಗತ್ಯವಿಲ್ಲ.
– ಪರೀಕ್ಷೆ, ಫ‌ಲಿತಾಂಶದ ಬಗೆಗೆ ತಲೆಕೆಡಿಸಿಕೊಳ್ಳುವ ಬದಲು ಓದಿನತ್ತ ಗಮನ ಕೇಂದ್ರೀಕರಿಸಿ.
– ಕೊನೆಯ ಹಂತದಲ್ಲಿ ಈವರೆಗೆ ಓದಿದ ವಿಷಯಗಳನ್ನು ಮತ್ತೂಮ್ಮೆ ಓದಿ ಸರಿಯಾಗಿ ಮನದಟ್ಟು ಮಾಡಿ ಕೊಳ್ಳಿ. ಹೊಸದಾಗಿ ಓದು ಆರಂಭಿಸು ವುದು ಆತಂಕವನ್ನು ಹೆಚ್ಚಿಸೀತು.
– ಪರೀಕ್ಷೆಯ ಮುನ್ನಾದಿನ ಕನಿಷ್ಠ 6 ಗಂಟೆ ನಿದ್ದೆ ಮಾಡಿ. ನಿದ್ದೆಗೆಟ್ಟು ಓದುವುದು ಸರಿಯಲ್ಲ.
– ಅಧ್ಯಯನ ಮತ್ತು ಪರೀಕ್ಷೆಯ ವೇಳೆ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನಹರಿಸಿ.
– ಸಕಾರಾತ್ಮಕ ಮನೋಭಾವ ಮೈಗೂಡಿಸಿಕೊಂಡಲ್ಲಿ ಆತಂಕ ಕಡಿಮೆಯಾಗುತ್ತದೆ.
– ಪರೀಕ್ಷೆ ಎದುರಿಸಿದ ಬಳಿಕ ಆ ಬಗ್ಗೆ ಚರ್ಚೆ ಬೇಡ, ಮುಂದಿನ ವಿಷಯದ ಪರೀಕ್ಷೆಗೆ ಸಜ್ಜಾಗುವುದೇ ನಿಮ್ಮ ಆದ್ಯತೆಯಾಗಲಿ.

logoblog

Thanks for reading 25-03-2024 26 Marks Possible Question Answers on First Language Kannada Subject...

Previous
« Prev Post

No comments:

Post a Comment