SSLC ಪರೀಕ್ಷೆಯಲ್ಲಿ 620ಕ್ಕೂ ಹೆಚ್ಚು ಅಂಕ ಗಳಿಸಲು ಈ ಸಲಹೆಗಳನ್ನು ಫಾಲೋ ಮಾಡಿ..!
ಕರ್ನಾಟಕ ಎಸ್‌ಎಸ್‌ಎಲ್‌ಸಿ ಬೋರ್ಡ್ ಎಕ್ಸಾಮ್ ಮುಂದಿನ ಮಾರ್ಚ್ ತಿಂಗಳಾಂತ್ಯದಲ್ಲಿ ನಡೆಯಲಿದೆ. ಈ ಪರೀಕ್ಷೆಯಲ್ಲಿ 620 ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಆಸೆ ಇದ್ದವರು, ಈ ಸಲಹೆಗಳನ್ನು ಫಾಲೋ ಮಾಡಿರಿ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಬೋರ್ಡ್ ಎಕ್ಸಾಮ್‌ಗೆ ಇನ್ನು 5 ತಿಂಗಳು ಮಾತ್ರವೇ ಬಾಕಿ ಇವೆ. ದಿನಗಳು ಹೋಗುವುದು ವಿದ್ಯಾರ್ಥಿಗಳಿಗೆ ಆಗಲಿ, ಪೋಷಕರಿಗೆ ಆಗಲಿ ಅಷ್ಟು ಗಮನಕ್ಕೆ ಬರುವುದಿಲ್ಲ. ಆದರೆ ಪರೀಕ್ಷೆಗೆ ಇನ್ನೆರಡು ತಿಂಗಳು ಮಾತ್ರವೇ ಇರುವುದು ಎಂದಾಗ ಬಹುಸಂಖ್ಯಾತ ವಿದ್ಯಾರ್ಥಿಗಳು, ಎಚ್ಚೆತ್ತುಕೊಳ್ಳುವುದು ಸರ್ವೇ ಸಾಮಾನ್ಯ. ಅದರೆ ನಮ್ಮ ಇಂದಿನ ಲೇಖನದಿಂದ ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷೆ ತಯಾರಿಗೆ ಎಚ್ಚೆತ್ತುಕೊಳ್ಳುವಲ್ಲಿ ಸಂಶಯವಿಲ್ಲ ಎಂದು ಭಾವಿಸುತ್ತೇವೆ. ನೀವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 620 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಲೇಬೇಕು ಎಂದುಕೊಂಡಲ್ಲಿ ತಯಾರಿಯ ವಿಧಾನದಲ್ಲಿಯೂ ಗಮನಹರಿಸಬೇಕಾಗುತ್ತದೆ. ಸಮಯ ನಿರ್ವಹಣೆಯಲ್ಲಿಯೂ ಗಮನಹರಿಸಬೇಕಾಗುತ್ತದೆ. ಆದ್ದರಿಂದ ನೀವು ಟಾಪ್ ಅಂಕಗಳನ್ನು ಗಳಿಸಲು ಇಂದಿನ ಲೇಖನದ ಸಲಹೆಗಳನ್ನು ಫಾಲೋ ಮಾಡಿರಿ.
ಈಗಾಗಲೇ ಎಸ್‌ಎಸ್ಎಲ್‌ಸಿ ತರಗತಿ ಬೋಧನೆಗೆ ಅರ್ಧವರ್ಷ ಕಳೆದಿದೆ. ಇಷ್ಟು ದಿನ ನೀವು ಪಡೆದ ಬೋಧನೆಯಲ್ಲಿ ಏನೆಲ್ಲ ಪಠ್ಯಕ್ರಮ (ಅಧ್ಯಾಯಗಳು, ಪದ್ಯಗಳು) ಇದೆ ಎಂದು ನೆನೆಸಿಕೊಂಡಲ್ಲಿ, ಎಷ್ಟೋ ವಿಷಯಗಳು ಮರೆತಿರಬಹುದು. ಆದ್ದರಿಂದ ಒಮ್ಮೆ ಎಲ್ಲ ವಿಷಯಗಳ ಪಠ್ಯಕ್ರಮಗಳನ್ನು ಆಗಾಗ ಓದಿಕೊಳ್ಳಿ. ನೀವು ಆ ಅಧ್ಯಾಯಗಳ ಹೆಸರಿನ ಮೇಲೆ ಕಣ್ಣಾಡಿಸಿದಾಗಲೆಲ್ಲ, ಆ ಪಠ್ಯದ ಬೋಧನೆ, ವಿಷಯಗಳೆಲ್ಲ ಒಮ್ಮೆ ನಿಮಗೆ ನೆನಪಿಗೆ ಬರಬೇಕು. ಆಗ ಮಾತ್ರ ನಿಮ್ಮ ಅಧ್ಯಯನ, ಓದು ಪರಿಣಾಮಕಾರಿಯಾಗಿದೆ ಎಂದರ್ಥ. ಒಂದು ವೇಳೆ ನೆನಪಿಗೆ ಬರದಲ್ಲಿ ಸರಿಯಾಗಿ ಓದಿಕೊಂಡಿಲ್ಲ ಎಂದರ್ಥ.
ಶಿಕ್ಷಕರು ಎಲ್ಲ ಪಠ್ಯಗಳನ್ನು ಪಾಠ ಮಾಡಿ ಮುಗಿಸಲಿ, ಆನಂತರದಲ್ಲಿ ಒಂದು ಕಡೆಯಿಂದ ನೋಟ್ಸ್ ಓದಿಕೊಳ್ಳೋಣ ಎಂದು ಕಾಯದಿರಿ. ಈಗಾಗಲೇ ನೀವು ಕೇಳಿರುವ ಪಾಠಗಳನ್ನು, ಪಡೆದಿರುವ ನೋಟ್ಸ್‌ಗಳನ್ನು ಓದಲು ಇಂದಿನಿಂದಲೇ ಆರಂಭಿಸಿ. ಪರೀಕ್ಷೆಗೆ ಹೆಚ್ಚು ದಿನಗಳಿವೆ ಎಂದು ತಯಾರಿ ಮುಂದೂಡಬೇಡಿ.
ನೀವು ಕನ್ನಡ ಮಾಧ್ಯಮದಲ್ಲೇ ಓದುವವರಾಗಿರಿ ಅಥವಾ ಇಂಗ್ಲಿಷ್ ಮಾಧ್ಯಮದಲ್ಲೇ ಓದುವವರಾಗಿರಿ. ಆದರೆ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಗಳಿಗೆ ಹೆಚ್ಚು ಒತ್ತು ನೀಡಿ ಓದುವುದು ಸೂಕ್ತ. ಕಾರಣ ಗಣಿತ ಹಾಗೂ ವಿಜ್ಞಾನದಲ್ಲಿ ಲೆಕ್ಕ, ಸೂತ್ರಗಳು, ಸಮೀಕರಣಗಳು, ಬಿಡಿಸಬೇಕಾದ ಸಮಸ್ಯೆಗಳು ತೀರ ಇರುತ್ತವೆ. ಇವುಗಳನ್ನು ಅಭ್ಯಾಸ ಮಾಡದೇ ಸುಮ್ಮನೇ ಓದಿದರೆ ಖಂಡಿತ ನೆನಪಿಗೆ ಬರುವುದಿಲ್ಲ. ಇಂಗ್ಲಿಷ್‌ನಲ್ಲೂ ಹಾಗೆಯೇ. ನೀವು ಓದುವ ಜತೆಗೆ- ವ್ಯಾಕರಣ, ಲೆಟರ್ ರೈಟಿಂಗ್, ಪ್ಯಾಸೇಜ್, ಇವುಗಳನ್ನು ಬರೆದು ಬರೆದು ಕಲಿಯಬೇಕಾಗಿದೆ. ಅಲ್ಲದೇ ಕರ್ನಾಟಕ ಅಭ್ಯರ್ಥಿಗಳಂತು ಅದರಲ್ಲೂ ಗ್ರಾಮೀಣ ಭಾಗದವರು ಇಂಗ್ಲಿಷ್ ಪದಗಳ ಅರ್ಥಗಳನ್ನು ತಿಳಿದು ಹೆಚ್ಚು ಕಲಿಯಬೇಕಾಗಿರುತ್ತದೆ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ವಿಷಯಗಳಿಗೂ ಸಹ ಗೈಡ್ ಎಂದು ಖರೀದಿಗೆ ಲಭ್ಯವಿದೆ. ಆದರೆ ಮೊದಲು ನೀವು ಹೆಚ್ಚು ಬೋರ್ಡ್ ನಿಗದಿಪಡಿಸಿರುವ ಪಠ್ಯ ಪುಸ್ತಕದ ಮೇಲೆ ಅವಲಂಭಿತರಾಗಿರಬೇಕು. ಅದನ್ನೇ ಹೆಚ್ಚು ಓದಿಕೊಳ್ಳಬೇಕು. ಇದರಲ್ಲಿ ನೀಡುವ ಅಭ್ಯಾಸಗಳನ್ನು ಮಾಡುವುದು ಉತ್ತಮ. ಕರ್ನಾಟಕ ಎಸ್‌ಎಸ್‌ಎಲ್‌ಸಿ ಪಠ್ಯಕ್ರಮದ ಮೇಲೆ ಹೆಚ್ಚು ಗಮನಹರಿಸಿ ಓದಬೇಕು. ಇದರ ಆಧಾರದಲ್ಲಿಯೇ ಪ್ರಶ್ನೆಗಳನ್ನು ಕೇಳುತ್ತಾರೆ ಎನ್ನುವುದನ್ನು ಮರೆಯದಿರಿ.
ಎಷ್ಟು ಸಾಧ್ಯವೋ ಅಷ್ಟು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಬಿಡಿಸುವುದರಿಂದ ನಿಮ್ಮ ನೆನಪಿನ ಶಕ್ತಿ, ನೀವು ಓದಿರುವ ವಿಷಯಗಳು ಎಷ್ಟು ನೆನಪಿದೆ, ಯಾವುದು ಅತಿ ಮುಖ್ಯ ಈ ಎಲ್ಲದಕ್ಕೂ ಉತ್ತರಗಳನ್ನು ಕಂಡುಕೊಳ್ಳಬಹುದಾಗಿದೆ.
ನಿಮ್ಮ ಶಿಕ್ಷಕರು ಹೇಳಿದ ಹಾಗೂ ಪ್ರಶ್ನೆ ಪತ್ರಿಕೆಗಳಿಂದ ತಿಳಿದ ಅತಿ ಮುಖ್ಯ ಟಾಪಿಕ್‌ಗಳನ್ನು ಹೆಚ್ಚು ಬಾರಿ ಕೇವಲ ಓದುವುದಕ್ಕಿಂತ, ಬರೆದು ಬರೆದು ಕಲಿಯಿರಿ. ಆಗ ಮಾತ್ರ ಬೇಗ ನೆನಪಿಗೆ ಬರುತ್ತದೆ. ಕೇವಲ ಕಂಠಪಾಠಕ್ಕೆ ಸೀಮಿತವಾಗಬೇಡಿ. ಬರೆದು ಕಲಿಯುವುದರಿಂದ ಕೇವಲ ಪರೀಕ್ಷೆಗೆ ಮಾತ್ರವಲ್ಲದೇ ನಂತರವು ಸಹ ನಿಮ್ಮ ನೆನಪಿನಲ್ಲಿ ಈ ವಿಷಯಗಳಿರುತ್ತವೆ. ಉನ್ನತ ಶಿಕ್ಷಣದಲ್ಲಿ ಈ ಜ್ಞಾನ ಸಹಾಯವಾಗುತ್ತದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂಕಗಳು ನಿಮ್ಮ ಮುಂದಿನ ವಿದ್ಯಾಭ್ಯಾಸದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಆಯ್ಕೆ ಮಾಡುವ ವಿಷಯದಿಂದ ಹಿಡಿದು ಕಾಲೇಜಿನವರೆಗೆ, ಆರ್ಥಿಕ ವ್ಯವಸ್ಥೆಯ ಮೇಲೆ ಎಲ್ಲದರ ಮೇಲೂ ಪರಿಣಾಮ ಬೀರುತ್ತವೆ. ಆದ್ದರಿಂದ ಬಹುಮುಖ್ಯ ಗ್ರೌಂಡ್‌ವರ್ಕ್ ಎಂದರೆ ಉತ್ತಮ ಪ್ಲಾನ್ ಮಾಡಿ ಓದುವುದಾಗಿದೆ. ಅದರಲ್ಲಿ ಪರೀಕ್ಷೆಗೆ ಒಂದೆರಡು ತಿಂಗಳು ಮುಂಚೆಯೇ ಪಠ್ಯಕ್ರಮದ ಎಲ್ಲ ಅಧ್ಯಾಯಗಳನ್ನು ಓದಿ, ಕಲಿತು ಮುಗಿಸುವುದು. ಈ ಓದಿನ ನಡುವೆ ಶಾಂತವಾಗಿ, ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಓದಿರಿ. ಜತೆಗೆ ವಿಶ್ರಾಂತಿ ಪಡೆದು ಓದಿರಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೀವು ಹೆಚ್ಚು ಅಂಕಗಳಿಸಬೇಕು ಎಂದಲ್ಲಿ, ನಿಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಬೇಕು ಎಂದಲ್ಲಿ, ಓದುವ ಸ್ಥಳದ ಆಯ್ಕೆಯೂ ಬಹುಮುಖ್ಯ. ಆ ಸ್ಥಳ ನಿಶಬ್ಧವಾಗಿರಲಿ. ನೀವು ಓದುವಾಗ ಯಾರು ಸಹ ಆಗಾಗ ನಿಮ್ಮನ್ನು ಮಾತನಾಡಿಸಿ ತೊಂದರೆ ಕೊಡುವ ಸ್ಥಳ ಇದಾಗಿರಬಾರದು. ಅಲ್ಲದೇ ಓದುವ ಸ್ಥಳದಲ್ಲಿ ಬುಕ್‌ಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಿ. ಆ ಪ್ರದೇಶಕ್ಕೆ ನೀವು ಸದಾ ಹೋಗಬೇಕು ಎನಿಸುವಷ್ಟು ಪ್ರಶಾಂತ ಸ್ಥಳ, ಶುಚಿಯಾದ ಸ್ಥಳ, ವ್ಯವಸ್ಥಿತ ಸ್ಥಳ ಆದಾಗಿರಲಿ.
ನೀವು ಪರೀಕ್ಷೆ ಬರೆಯಲಿರುವ ಪ್ರತಿ ಪತ್ರಿಕೆಗೆ ಸಮಯ ನಿಗದಿಪಡಿಸಿ. ನಿಮಗೆ ಹೆಚ್ಚು ಕಷ್ಟ ಎನಿಸುವ ವಿಷಯಗಳಿಗೆ ಹೆಚ್ಚು ಸಮಯ ನಿಗದಿಪಡಿಸಿ ಓದಿರಿ. ಸೂಕ್ತ ಟೈಮ್ ಟೇಬಲ್ ಹಾಕಿಕೊಂಡು ಓದಿರಿ. ಕಷ್ಟ ಎನಿಸುವ ಟಾಪಿಕ್‌ಗಳನ್ನು, ಅರ್ಥವಾಗದ ಟಾಪಿಕ್‌ಗಳನ್ನು ಶಿಕ್ಷಕರಲ್ಲಿ, ಸಹಪಾಠಿಗಳಲ್ಲಿ ಕೇಳಿ ತಿಳಿದುಕೊಳ್ಳಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 620 ಕ್ಕೂ ಹೆಚ್ಚು ಅಂಕಗಳಿಸುವ ನಿಮ್ಮ ಗುರಿಗೆ, ನಿಮ್ಮ ಸ್ವಯಂ ಅಧ್ಯಯನ ಮಾರ್ಗವೇ ಅಂತಿಮ ಪರಿಹಾರ ಹಾಗೂ ಮಾರ್ಗೋಪಾಯಗಳು. ಅಂದರೆ ನಿಮ್ಮ ಅಧ್ಯಯನ ತಂತ್ರಗಾರಿಕೆ, ನೀವು ನೀಡುವ ಸಮಯ, ನೀವು ಓದುವ ವಿಧಾನ, ಇವುಗಳೇ ನಿಮಗೆ ಪರಿಹಾರಗಳು. ಇವು ಬಿಟ್ಟು ಬೇರೆ ಯಾವುದೇ ಸುಲಭ ಮಾರ್ಗ ಹೆಚ್ಚು ಅಂಕಗಳಿಸಲು ಇಲ್ಲ. ಆದ್ದರಿಂದ ಪ್ರತಿ ದಿನವು ಸಹ ನಿಮ್ಮ ಸಣ್ಣ ಸಣ್ಣ ಗುರಿಗಳನ್ನು ತಲುಪಿ, ಉತ್ತಮವಾಗಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕಾಗಿದೆ.
ಪರೀಕ್ಷೆಗೆ ಕನಿಷ್ಠ ಇನ್ನೊಂದೆ ತಿಂಗಳು ಬಾಕಿ ಇದೆ ಎನ್ನುವ ಸಂದರ್ಭದಲ್ಲಿ ನೀವು ಓದಿದ, ಕಲಿತ ಎಲ್ಲವನ್ನು ಪುನರಾವರ್ತನೆ ಮಾಡಬೇಕು. ಓದಿದನ್ನು ಪುನರಾವರ್ತನೆ ಮಾಡದಿದ್ದಲ್ಲಿ ಅದೆಷ್ಟೋ ವಿಷಯಗಳು ಮರೆತು ಹೋಗುತ್ತವೆ. ಈ ಸಂದರ್ಭದಲ್ಲಿ ಸಂಶಯಗಳು ಇರುವ ಟಾಪಿಕ್‌ಗಳು ಸಿಗುತ್ತವೆ. ಅವುಗಳನ್ನು ಸಹ ಕ್ಲಿಯರ್ ಮಾಡಿಕೊಳ್ಳಲು ಈ ಪುನರಾವರ್ತನೆ ಸಹಾಯವಾಗುತ್ತದೆ. ಪುನರಾವರ್ತನೆಗೆ ಸಮಯ ನೀಡುವುದನ್ನು ಯಾರು ಸಹ ಮಿಸ್ ಮಾಡಲೇಬಾರದು.
ಈ ವರ್ಷ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆ.
ಕರ್ನಾಟಕ 10 ನೇ ತರಗತಿ ಬೋರ್ಡ್ ಪರೀಕ್ಷೆಯು ಮಾರ್ಚ್ 31 ರಿಂದ ಏಪ್ರಿಲ್ 15, 2023 ರವರೆಗೆ ನಡೆಯಿತು. ಕರ್ನಾಟಕ SSLC ಉತ್ತರ ಕೀಗಳನ್ನು ಏಪ್ರಿಲ್ 17, 2023 ರಂದು ಪ್ರಕಟಿಸಲಾಗಿದೆ. ಕರ್ನಾಟಕ SSLC ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21, 2023 ರಂದು ಪ್ರಾರಂಭವಾಯಿತು. ಕೆಳಗಿನ ಎಲ್ಲಾ ಇತ್ತೀಚಿನ ನವೀಕರಣಗಳನ್ನು ಅನುಸರಿಸಿ.
ಪರೀಕ್ಷಾ ಆತಂಕ ಪರಿಹಾರವೇನು?
ಬದಲಾದ ಸಾಮಾಜಿಕ ಪರಿಸ್ಥಿತಿಗಳಿಂದ ಹಾಗೂ ಹೆಚ್ಚಿದ ಸಾಮಾಜಿಕ ಒತ್ತಡದಿಂದ ‘ಪರೀಕ್ಷಾ ಆತಂಕ’ ಹಿಂದೆಂದೂ ಕಾಣದಷ್ಟು ಪ್ರಾಮುಖ್ಯ ಪಡೆಯುತ್ತಿದೆ. ಒಂಬತ್ತನೆಯ ತರಗತಿಯವರೆಗೆ ವಿದ್ಯಾರ್ಥಿಗಳು ನಪಾಸಾಗುವಂತಿಲ್ಲ ಎನ್ನುವ ಸತ್ಯ ಗೊತ್ತಿದ್ದರೂ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಆತಂಕವೇನೂ ಕಡಿಮೆ ಆಗಿಲ್ಲ. ಬದಲಾಗಿ ಎಲ್‌ಕೆಜಿ, ಯುಕೆಜಿಯಲ್ಲಿ ಕಲಿಯುತ್ತಿರುವ ಮಕ್ಕಳೂ ಪರೀಕ್ಷೆಯೆಂದರೆ ಭಯಪಡುವ ಸಂದರ್ಭಗಳನ್ನು ಕಾಣುತ್ತಿದ್ದೇವೆ.
ಪರೀಕ್ಷೆಗಳು ಹತ್ತಿರವಾಗುತ್ತಲೇ ಮಕ್ಕಳಿಗಿಂತಲೂ ಹೆತ್ತವರು ಹೆಚ್ಚು ಆತಂಕಿತರಾಗಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲು ಪ್ರಾರಂಭಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರದ್ದು ಅದೇ ಧಾಟಿ. ‘ಪರೀಕ್ಷೆ ಹತ್ತಿರ ಬಂತು, ಈ ಬಾರಿ ಪಬ್ಲಿಕ್ ಪರೀಕ್ಷೆ. ಗಂಭೀರವಾಗಿ ತೆಗೆದುಕೊಳ್ಳಿ’ ಎನ್ನುವ ಸಲಹೆ. ನಮಗೆ ತಿಳಿದೋ ತಿಳಿದೆಯೋ ಪರೀಕ್ಷೆ ಬಂತು ಪರೀಕ್ಷೆ ಬಂತು ಎನ್ನುವ ಧ್ವನಿ ‘ಭೂತ ಬಂತು ಭೂತ ಬಂತು’ ಎನ್ನುವ ಹಾಗೆ ಧ್ವನಿಸುತ್ತದೆ. ಅದು ನಮ್ಮ ಅರಿವಿಗೆ ಬರುವುದಿಲ್ಲ.
ಹಾಗಿದ್ದರೆ ಪರೀಕ್ಷೆಗಳ ಬಗ್ಗೆ ಭಯ ಬೇಡವೇ? ಸ್ವಲ್ಪವೂ ಭಯವಿರದಿದ್ದರೆ ಮಕ್ಕಳು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವಿರಾ? ನಿಜ. ಸಣ್ಣ ಪ್ರಮಾಣದ, ಆರೋಗ್ಯಕರ ಭಯ ವ್ಯಕ್ತಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಆದರೆ ಅದು ಅತಿಯಾಗದಂತೆ ನೋಡಿಕೊಳ್ಳಬೇಕು. ದುರದೃಷ್ಟವೆಂದರೆ ಚೆನ್ನಾಗಿ ಓದುವ ವಿದ್ಯಾರ್ಥಿಗಳು ಹಾಗೂ ಉತ್ತಮ ಅಂಕಗಳನ್ನೇ ಪಡೆದುಕೊಂಡ ವಿದ್ಯಾರ್ಥಿಗಳೂ ಹೆಚ್ಚಿನ ಪ್ರಮಾಣದಲ್ಲಿ ಆತಂಕ ಅನುಭವಿಸುವುದೂ.
ಪರೀಕ್ಷಾ ಆತಂಕದ ಲಕ್ಷಣಗಳು
1) ಭಾವನಾತ್ಮಕ ಲಕ್ಷಣಗಳು
ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ಮಕ್ಕಳಲ್ಲಿ ಹಿಂದಿನ ಪರೀಕ್ಷೆಗಳ ಕಹಿ ಅನುಭವಗಳ ನೆನಪು, ಮತ್ತೆ ಫೇಲಾದರೆ ಎನ್ನುವ ಭಯ, ಅಸಹಾಯಕತೆ, ಏನೂ ಹೊಳೆಯದಂತಹ ಸ್ಥಿತಿ, ಋಣಾತ್ಮಕ ಆಲೋಚನೆಗಳು ಕಾಡತೊಡಗುತ್ತವೆ. ತಮ್ಮನ್ನೇ ಹಳಿದುಕೊಳ್ಳುವುದು, ಮುಜುಗರ ಅನುಭವಿಸುವುದು, ಅಕಾರಣ ಸಿಟ್ಟು, ಆತಂಕ ಕಂಡುಬರುವುದು.
2) ದೈಹಿಕ ಲಕ್ಷಣಗಳು
* ವಾಕರಿಕೆ, ತಲೆಸುತ್ತು
* ಉಸಿರಾಡಲು ಕಷ್ಟವಾಗುವುದು.
* ತಲೆನೋವು
* ಹಸಿವಿಲ್ಲದಿರುವುದು
* ನಿದ್ರಾಹೀನತೆ
* ಎದೆಬಡಿತ ಜೋರಾಗುವುದು..
ಕಡಿಮೆ ಮಾಡುವುದು ಹೇಗೆ?
ಪರೀಕ್ಷೆ ಕುರಿತಾಗಿ ಶಾಲೆಯಲ್ಲಿ, ಮನೆಯಲ್ಲಿ ಕೆಲವು ವಿಚಾರಗಳನ್ನು ತಿಳಿಸಬೇಕು. ‘ನಾನು ವಿದ್ಯಾರ್ಥಿ, ನನ್ನ ಕರ್ತವ್ಯದಂತೆ ಶಾಲೆಗೆ ಹೋಗಿದ್ದೇನೆ. ಪಾಠಗಳನ್ನು ಕೇಳಿಸಿಕೊಂಡಿದ್ದೇನೆ. ನೋಟ್ಸ್ ಬರೆದುಕೊಂಡಿದ್ದೇನೆ. ಇನ್ನು ನನ್ನ ಮುಂದೆ ಇರುವುದು ಪರೀಕ್ಷೆಗೆ ಉಳಿದಿರುವ ದಿನಗಳನ್ನು ವಿಭಜಿಸಿ, ಓದಿದ್ದನ್ನು ಪುನರ್ ಮನನ ಮಾಡಿಕೊಂಡು ಪರೀಕ್ಷೆ ಬರೆಯುವುದು ಮಾತ್ರ. ನನ್ನ ನಿಯಂತ್ರಣದಲ್ಲಿರುವ ಕರ್ತವ್ಯವನ್ನು ನಾನು ಚೆನ್ನಾಗಿಯೇ ಮಾಡುವೆ. ನನ್ನ ಮಿತಿಯಲ್ಲಿರದ ವಿಚಾರಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನನ್ನ ಮಿತಿಯಲ್ಲಿರದ ವಿಚಾರಗಳೆಂದರೆ, ಪ್ರಶ್ನೆಪತ್ರಿಕೆ ಹೇಗಿರುತ್ತದೆ? ಮೌಲ್ಯಮಾಪನ ಹೇಗಿರುತ್ತದೆ? ನಾನು ಓದಿದ ವಿಷಯಗಳೇ ಪರೀಕ್ಷೆಗೆ ಬರುತ್ತದೋ ಇಲ್ಲವೋ, ನನಗೆ ಸಮಯ ಸಾಲದಿದ್ದರೆ? ಓದಿದ್ದು ಮರೆತು ಹೋದರೆ? ಅಂಕಗಳು ಕಡಿಮೆ ಬಂದರೆ? ನಾನು ಫೇಲಾದರೆ’ ಇಂಥ ಪ್ರಶ್ನೆಗಳನ್ನು ಗುರುತಿಸಿ ಆ ವಿಚಾರಗಳನ್ನು ಅಲಕ್ಷಿಸುವುದನ್ನು ಹೇಳಿಕೊಡಬೇಕು. ನಮ್ಮ ಗಮನ ಶೇ 100ರಷ್ಟು ಕಾರ್ಯಕ್ಷಮತೆಯ ಕಡೆ ಇರಬೇಕೇ ವಿನಃ ಶೇ 100ರಷ್ಟು ಅಂಕಗಳಲ್ಲ ಎಂದು ತಿಳಿಸಿಕೊಡಬೇಕು.
* ಪರೀಕ್ಷಾ ಆತಂಕ ಇರುವ ಮಕ್ಕಳನ್ನು ಗುರುತಿಸಿ ಈ ವಿಚಾರಗಳನ್ನು ತಿಳಿಸಬೇಕು.
* ಅಣುಕು ಪರೀಕ್ಷೆಗಳನ್ನು ನಡೆಸಿ ಅವರಲ್ಲಿನ ಕಾರ್ಯಕ್ಷಮತೆಯನ್ನು ಗುರುತಿಸಿ ಧೈರ್ಯ ತುಂಬಬೇಕು.
* ದೀರ್ಘ ಉಸಿರಾಟದ ಕ್ರಮಗಳನ್ನು ಕಲಿಸಿಕೊಡಬೇಕು.
* ಫೇಲಾಗುವ ಆತಂಕವಿದ್ದರೆ ಪದ್ಯದ ಇಡೀ ಓದಿನ ಬದಲು ಆಯ್ದ ಭಾಗಗಳನ್ನು ಸರಿಯಾಗಿ ಓದಲು ತಿಳಿಸಬೇಕು.
ಅತಿ ಆತಂಕ ಗುರುತಿಸುವುದು ಹೇಗೆ?
* ಪೋಷಕರು - ಶಿಕ್ಷಕರು ಅದೆಷ್ಟೇ ಸಮಾಧಾನ ಮಾಡಿದರೂ ಮಗು ಅತಿಯಾಗಿ ಭಯಪಡುವುದು, ಶಾಲೆ, ಪರೀಕ್ಷೆಗಳನ್ನು ತಪ್ಪಿಸುವುದು.
* ವೈದ್ಯರು ತಪಾಸಣೆ ಮಾಡಿಯೂ ಯಾವುದೇ ನಿಗದಿತ ಕಾಯಿಲೆಯಿರದಿದ್ದರೂ ನಿಲ್ಲದ ದೈಹಿಕಲಕ್ಷಣಗಳಾದ ವಾಂತಿ, ವಾಕರಿಕೆ, ನಿದ್ರಾಹೀನತೆ, ತಲೆನೋವು ಇತ್ಯಾದಿ.
* ಸದಾ ಆತಂಕಿತರಾಗಿರುವುದು, ಕಣ್ಣೀರಿಡುವುದು, ಓದಲು ನಿರಾಕರಿಸುವುದು.
* ತನ್ನನ್ನೇ ಹಳಿದುಕೊಳ್ಳುವುದು, ಬದುಕಿರುವುದು ವ್ಯರ್ಥವೆನ್ನುವಂತಹ ಮಾತುಗಳನ್ನಾಡುವುದು.
* ಅಪರಾಧಿ ಮನೋಭಾವ ಹೊಂದಿರುವುದು, ತಾನು ಒಳ್ಳೆಯ ವಿದ್ಯಾರ್ಥಿಯಲ್ಲ, ಒಳ್ಳೆಯ ಮಗ/ಮಗಳಲ್ಲ ಎನ್ನುವ ಭಾವನೆಗಳನ್ನು ಹೊಂದಿರುವುದು .
National Crime Records Bureau (NCRB) 2017-2021ರ ವರದಿಯ ಪ್ರಕಾರ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಪ್ರಕರಣಗಳು ಶೇ 21.79ರಷ್ಟು ಹೆಚ್ಚಿವೆ. ಇದು ಆತಂಕದಾಯಕ ವಿಷಯ. ಒತ್ತಡಮಯ ಶೈಕ್ಷಣಿಕ ಬದುಕಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶಿಕ್ಷಕರು ಮುಂದಾದರೆ, ಹೆತ್ತವರು ಮಕ್ಕಳಿಗೆ ಅನವಶ್ಯಕ ಒತ್ತಡ ಹೇರದೆ, ಇತರರೊಂದಿಗೆ ಹೋಲಿಕೆ ಮಾಡದೆ ಪರೀಕ್ಷೆಯ ದಿನಗಳಲ್ಲಿ ಜತೆಗಿದ್ದರೆ ಈ ಆತ್ಮಹತ್ಯೆಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸಬಹುದು.
ಶಿಕ್ಷಕರಿಗೆ ಸಲಹೆಗಳು
* ಪರೀಕ್ಷೆ ಬಂತು ಓದಿ ಎಂದು ಒತ್ತಾಯ ಮಾಡುವ ಜೊತೆಗೆ ಹೇಗೆ ಓದಬೇಕು ಎಂದು ತಿಳಿಸಿಕೊಡಿ.
* ಪರೀಕ್ಷೆಯಲ್ಲಿ ಉತ್ತರ ಬರೆಯುವುದು ಕಲೆ. ಆ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಿ.
* ಸಮಯ ನಿಭಾವಣೆ ಕಲಿಸಿಕೊಡಿ.
* ಅಣುಕು ಪರೀಕ್ಷೆಗಳನ್ನು ನಡೆಸಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ.
* ಪರೀಕ್ಷಾ ತಯಾರಿಯ ವೇಳಾಪಟ್ಟಿ ತಯಾರಿಸಲು ಸಹಾಯ ಮಾಡಿ.
* ಯೋಗ - ಪ್ರಾಣಾಯಾಮಗಳನ್ನು ಕಲಿಸಿಕೊಡಿ.
* ನೀನು ಒಳ್ಳೆಯ ವಿದ್ಯಾರ್ಥಿ, ನಿಮ್ಮಿಂದ ಶಾಲೆಗೆ ರ‍್ಯಾಂಕ್ ಬಂದೇ ಬರುತ್ತದೆ ಎಂದು ನಮ್ಮ ನಿರೀಕ್ಷೆ ಎನ್ನುವಂತಹ ಮಾತುಗಳು ಬೇಡ.
* ನೀನು ಪ್ರಯತ್ನ ಪಡಬೇಕು. ನೀನು ಫೇಲಾದರೆ ಶಾಲೆಯ ಪರ್ಸಂಟೇಜ್ ಹಾಳಾಗುತ್ತದೆ ಎನ್ನುವಂತಹ ಮಾತುಗಳಂತೂ ಖಂಡಿತ ಬೇಡ.
ಹೆತ್ತವರಿಗೆ ಸಲಹೆಗಳು
* ಪರೀಕ್ಷಾ ಮುನ್ನ ತಯಾರಿಯಲ್ಲಿ ಜೊತೆಗಿರಿ.
* ಪರೀಕ್ಷಾ ತಯಾರಿಯ ವೇಳಾಪಟ್ಟಿ ತಯಾರಿಸಿ, ಹಾಗೆ ಓದಲು ತಿಳಿಸಿ.
* ಓದಿನ ಮಧ್ಯೆ ಸಣ್ಣ ವಿರಾಮಗಳನ್ನು ನೀಡಿ.
* ಈ ಸರಿ ಫೇಲಾದರೆ?, ಕಡಿಮೆ ಅಂಕ ಬಂದರೆ? ಎನ್ನುವ ಮಾತುಗಳು ಬೇಡ.
* ಫಲಿತಾಂಶದ ನಿರ್ಧರಿತ ಕಾಲೇಜಿನ ಆಯ್ಕೆ - ಕೋರ್ಸಿನ ಆಯ್ಕೆ ಕುರಿತು ಹೇಳಿ ಭಯಪಡಿಸುವುದು ಬೇಡ.

No comments:
Post a Comment