Friday, December 8, 2023

Hon'ble Minister of Education's reply to the question asked in the House about conducting 03 annual examination for SSLC and PUC children.

  Wisdom News       Friday, December 8, 2023
Hedding ; Hon'ble Minister of Education's reply to the question asked in the House about conducting 03 annual examination for SSLC and PUC children...


SSLC ಮತ್ತು PUC ಪರೀಕ್ಷೆಗಳು ರದ್ದು! ವಿದ್ಯಾರ್ಥಿಗಳಿಗೆ ಇನ್ಮುಂದೆ 3 ವಾರ್ಷಿಕ ಪರೀಕ್ಷೆ
ಹೊಸ ಪರೀಕ್ಷಾ ವೇಳಾಪಟ್ಟಿಯ ಅಡಿಯಲ್ಲಿ, ವಿದ್ಯಾರ್ಥಿಗಳು ಈಗ ಮೂರು ವಾರ್ಷಿಕ ಪರೀಕ್ಷೆಗಳನ್ನು ಬರೆಯಬೇಕು ಎಂದು ಸೂಚಿಸಲಾಗಿದೆ.

ಈ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಹಲವಾರು ಶೈಕ್ಷಣಿಕ ಬದಲಾವಣೆಗಳು ಉಂಟಾಗಿದೆ. ಅದೇ ರೀತಿಯಲ್ಲಿ ಇನ್ನೂಂದು ಮಹತ್ತರ ಬದಲಾವಣೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅದೇನೆಂದರೆ ಪೂರಕ ಪರೀಕ್ಷೆಯನ್ನು ರದ್ದುಗೊಳಿಸುತ್ತಿರುವ ಸಂಗತಿಯಾಗಿದೆ. SSLC ಮತ್ತು PUC ಪರೀಕ್ಷೆಗಳನ್ನು ರದ್ದು ಮಾಡುವುದಾಗಿ ಹೇಳಲಾಗಿದೆ. ಅಷ್ಟೇ ಅಲ್ಲದೇ 3 ವಾರ್ಷಿಕ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಲಾಗಿದೆ. ಕರ್ನಾಟಕ ಸರ್ಕಾರವು 2023-2024ರ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ SSLC ಮತ್ತು PUC ಪೂರಕ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿರುವುದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. 

ಹೊಸ ಪರೀಕ್ಷಾ ವೇಳಾಪಟ್ಟಿಯ ಅಡಿಯಲ್ಲಿ, ವಿದ್ಯಾರ್ಥಿಗಳು ಈಗ ಮೂರು ವಾರ್ಷಿಕ ಪರೀಕ್ಷೆಗಳನ್ನು ಬರೆಯಬೇಕು ಎಂದು ಸೂಚಿಸಲಾಗಿದೆ. ವಿದ್ಯಾರ್ಥಿಗಳು ಈ ಪರೀಕ್ಷಾ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಈ ರೀತಿ ಪರೀಕ್ಷಾ ಕ್ರಮವನ್ನು ಜಾರಿಗೊಳಿಸಲು ಸಹ ನಿರ್ಧಿಷ್ಟ ಕಾರಣವಿದೆ. ಅದೇನೆಂದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂಬ ಆತಂಕ ಕಡಿಮೆ ಮಾಡುವ ಸಲುವಾಗಿ ಈ ರೀತಿ ಕ್ರಮಕೈಗೊಳ್ಳಲಾಗುತ್ತಿದೆ.

ಹಿಂದಿನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಫೇಲ್ ಆದರೆ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇನ್ನು ಮುಂದೆ ಹಾಗಿರುವುದಿಲ್ಲ. ಹೊಸ ವ್ಯವಸ್ಥೆಯು ಎಲ್ಲಾ ಮೂರು ಮೌಲ್ಯಮಾಪನಗಳಿಂದ ಹೆಚ್ಚಿನ ಅಂಕ ಗಳಿಸುವಂತೆ ಅವರನ್ನು ಪ್ರೋತ್ಸಾಹಿಸುತ್ತದೆ. ಆಗ ಪೂರಕ ಪರೀಕ್ಷೆಗಿಂತ ಇನ್ನೂ ಹೆಚ್ಚಿನ ಅವಕಾಶ ವಿದ್ಯಾರ್ಥಿಗಳಿಗೆ ದೊರೆತಂತಾಗುತ್ತದೆ.

ಮೂರು ವಾರ್ಷಿಕ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮಾಡುತ್ತದೆ. ವಿದ್ಯಾರ್ಥಿಗಳು ಈ ಮೂರು ಪ್ರಯತ್ನಗಳಲ್ಲಿ ಪಡೆದ ಅಂಕಗಳಲ್ಲಿ ಹೆಚ್ಚಿನ ಅಂಕಗಳೊಂದಿಗೆ ಯಾವ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ ಎಂಬುದನ್ನು ಪರಿಗಣಿಸಲಾಗುತ್ತದೆ. ಮೊದಲ ತಿಂಗಳು ಕಳೆದ ನಂತರ ತಮ್ಮ ಮುಂದಿನ ಶೈಕ್ಷಣಿಕ ಕೋರ್ಸ್‌ಗೆ ದಾಖಲಾಗುವ ವಿದ್ಯಾರ್ಥಿಗಳು ಬ್ರಿಡ್ಜ್ ಕೋರ್ಸ್ ತೆಗೆದುಕೊಳ್ಳಬೇಕಾಗುತ್ತದೆ. ಈ ಬ್ರಿಡ್ಜ್ ಕೋರ್ಸ್‌ಗಳನ್ನು ಪ್ರಿ-ಯೂನಿವರ್ಸಿಟಿ ಕಾಲೇಜು (ಪಿಯುಸಿ) ಮಟ್ಟದಲ್ಲಿ ಅಥವಾ ಪದವಿ ನೀಡುವ ಕಾಲೇಜುಗಳಲ್ಲಿ ನೀಡಲಾಗುತ್ತದೆ.

ಈ ಕೋರ್ಸ್‌ಗಳ ಉದ್ದೇಶವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸೇರಿಕೊಳ್ಳಲು ಸಹಾಯವಾಗುವಂತೆ ಮಾಡುವುದಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪೂರಕ ಪರೀಕ್ಷೆಗಳನ್ನು ರದ್ದುಗೊಳಿಸಿರುವುದು ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ.

SSLC PUC Exam : ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನು 3 ಪರೀಕ್ಷೆ! ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ...


ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ (Education Sector) ಆಮೂಲಾಗ್ರ ಬದಲಾವಣೆ ತರುವತ್ತ ಹೆಜ್ಜೆಯನ್ನಿಡುತ್ತಿದೆ. ಇದಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಎಸ್‌ಎಸ್‌ಎಲ್‌ಸಿ (SSLC) ಹಾಗೂ ಪಿಯುಸಿ (PUC) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಡಲಾಗಿದೆ. 2023-24ನೇ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷಾ (SSLC PUC Exam) ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ಒಂದೇ ವರ್ಷಕ್ಕೆ ಮೂರು ಪರೀಕ್ಷೆಯನ್ನು ಆಯೋಜನೆ ಮಾಡಿ ಆದೇಶಿಸಲಾಗಿದೆ. ಈ ಮೂಲಕ ಪರೀಕ್ಷೆಯಲ್ಲಿ ಅನುತ್ತೀರ್ಣ ಆದವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ರಾಜ್ಯ ಶಿಕ್ಷಣ ಇಲಾಖೆ ಮಾಡಿದ್ದು, ಪ್ರಮುಖ ಪರೀಕ್ಷೆಯ ನಂತರ ಎರಡು ಪೂರಕ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಅವರು ಶಿಕ್ಷಕರ ದಿನದಂದೇ ಇಂಥದ್ದೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಈಗಿನ ಹೊಸ ನಿಯಮದಂತೆ ಪೂರಕ ಪರೀಕ್ಷೆ ಎಂಬ ಪದ್ಧತಿಯನ್ನು ತೆಗೆದಿದ್ದು, ಪರೀಕ್ಷೆ 1, ಪರೀಕ್ಷೆ 2, ಪರೀಕ್ಷೆ 3 ಎಂದು ಮಾಡಲಾಗಿದೆ. ಅದರನ್ವಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ (II PUC Exam Schedule) ಹೀಗಿದೆ
ಪರೀಕ್ಷೆ 1- ಮಾರ್ಚ್ 1ರಿಂದ ಮಾರ್ಚ್ 25ರವರೆಗೆ ನಡೆಯಲಿದೆ
ಪರೀಕ್ಷೆ 2 – ಮೇ 15ರಿಂದ ಜೂನ್ 5ರವರೆಗೆ ನಡೆಯಲಿದೆ
ಪರೀಕ್ಷೆ 3 – ಜುಲೈ 12ರಿಂದ ಜುಲೈ 30ರವರೆಗೆ ನಡೆಯಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿ (SSLC Exam Schedule) ಹೀಗಿದೆ
ಪರೀಕ್ಷೆ 1- ಮಾರ್ಚ್ 30ರಿಂದ ಏಪ್ರಿಲ್ 15ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ 2 – ಜೂನ್ 12ರಿಂದ ಜೂನ್ 19ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ 3 – ಜುಲೈ 29ರಿಂದ ಆಗಸ್ಟ್ 5ರವರೆಗೆ ನಡೆಸಲು ತೀರ್ಮಾನ

ಫೇಲ್‌ ಆದರೂ ಮುಂದಿನ ತರಗತಿಗಳಿಗೆ ಪ್ರವೇಶ!
ಮಂಗಳವಾರ ವಿಧಾನಸಸೌಧದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ (Teachers Day) ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ , ಈ ವಿಷಯವನ್ನು ತಿಳಿಸಿದರು. ಅಲ್ಲದೆ, ಒಂದು ವೇಳೆ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಮುಂದಿನ ತರಗತಿಗಳಿಗೆ ಪ್ರವೇಶಿಸುವ ಅವಕಾಶವನ್ನು ನೀಡಲಾಗುತ್ತಿದೆ. ಆದರೆ, ಅವರು ಉಳಿದ ಎರಡು ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಈ ಮೂಲಕ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು.

ಇನ್ನು ಇದರಲ್ಲಿ ಕೆಲವು ಮಾನದಂಡಗಳನ್ನು ಅನುಸರಿಸಲಾಗಿದೆ. ಒಟ್ಟು ಅಂಕಗಳ ಪೈಕಿ ಕನಿಷ್ಠ ಅಂಕಗಳನ್ನು ತೇರ್ಗಡೆಗೆ ಪರಿಗಣಿಸಲಾಗುವುದು. ಫೇಲ್ ಅಥವಾ ಕಡಿಮೆ ಅಂಕ ಬಂದವರು 3 ಬಾರಿ ಪರೀಕ್ಷೆ ಬರೆಯಬಹುದು. ಈ ಮೂಲಕ ಕಲಿಕಾ ಗುಣಮಟ್ಟ ಹಾಗೂ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.

32.44 ಲಕ್ಷ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆ (Department of Education) ಕ್ರಮ ವಹಿಸಿದ್ದು, ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಈವರೆಗೆ ವಾರಕ್ಕೆ ಒಂದು ದಿನ ಮಾತ್ರವೇ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಈಗ ವಾರಕ್ಕೆ ಎರಡು ದಿನ ಮೊಟ್ಟೆ ನೀಡಲು ತೀರ್ಮಾನ ಮಾಡಿದ್ದೇವೆ. ಸುಮಾರು 58 ಲಕ್ಷ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಕ್ಕಂತೆ ಆಗುತ್ತದೆ. ಈ ಯೋಜನೆಗೆ ಅಂದಾಜು 280 ಕೋಟಿ ರೂಪಾಯಿ ವೆಚ್ಚ ಆಗಲಿದೆ. 10ನೇ ತರಗತಿವರೆಗಿನ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲಾಗುವುದು ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಶಿಕ್ಷಕರ ಕೊರತೆ ನೀಗಿಸಿದ ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ಇತ್ತು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಗಮನಕ್ಕೆ ತರಲಾಯಿತು. ಕೂಡಲೇ ಅವರು ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶವನ್ನು ನೀಡಿದರು. 10 ಸಾವಿರ ಅತಿಥಿ ಉಪನ್ಯಾಸಕರನ್ನು 2 ದಿನಗಳಲ್ಲೇ ನೇಮಕ ಮಾಡಿಕೊಳ್ಳುವಂತೆ ಸಿಎಂ ಆದೇಶ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಸಂತಸ ಹಂಚಿಕೊಂಡರು.

ಶಿಕ್ಷಕರ ವರ್ಗಾವಣೆ ವಿಚಾರದಲ್ಲೂ ಸಾಕಷ್ಟು ಗೊಂದಲ ಇತ್ತು. 32 ಸಾವಿರ ಶಿಕ್ಷಕರು ಸ್ವಂತ ಇಚ್ಛೆಯಿಂದ ವರ್ಗಾವಣೆ ಪಡೆದುಕೊಂಡಿದ್ದಾರೆ. ನಮ್ಮ‌ ಸರ್ಕಾರ ಬಂದ ಮೇಲೆ 10 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಕೊರೊನಾ ನಂತರ ಕಲಿಕಾ ಚೇತರಿಕೆ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.

ಸಂಗತ: 3 ಪರೀಕ್ಷೆ ಮತ್ತು ಮೌಲ್ಯಮಾಪನದ ಗುಣಮಟ್ಟ...

ರಾಜ್ಯದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪ್ರಸ್ತುತ ಪರೀಕ್ಷಾ ವ್ಯವಸ್ಥೆಯಲ್ಲಿದ್ದ ಒಂದು ವಾರ್ಷಿಕ ಮತ್ತು ಪೂರಕ ಪರೀಕ್ಷೆ ಅಥವಾ ಸಪ್ಲಿಮೆಂಟರಿಯ ಬದಲಾಗಿ, ವಾರ್ಷಿಕ ಪರೀಕ್ಷೆ ಒಂದು, ಎರಡು, ಮೂರು ಎಂದು ಮರುನಾಮಕರಣ ಮಾಡಲಾಗಿದೆ.

ಪ್ರತಿ ವಿದ್ಯಾರ್ಥಿಯ ಕಲಿಯುವ ವೇಗ ಮತ್ತು ವಿಧಾನ ಬೇರೆಯಾಗಿರುತ್ತದೆ. ಈ ರೀತಿ ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಅವರ ವೇಗಕ್ಕೆ ಸರಿಯಾಗಿ ಕಲಿಯುವಂತೆ ಮಾಡುವ ಮತ್ತು ಸಮಯದ ಮಿತಿಯಿಂದ ಉಂಟಾಗುವ ಒತ್ತಡ ಕಡಿಮೆ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ಇಲಾಖೆ ತಿಳಿಸಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ದೃಷ್ಟಿಯಿಂದ, ಬೇರೆ ಬೇರೆ ಹಂತಗಳಲ್ಲಿ ವರ್ಷಕ್ಕೆ ಮೂರು ಪರೀಕ್ಷೆ ನಡೆಸುವ ಈ ತೀರ್ಮಾನ ಸೂಕ್ತವಾದದ್ದು.

ಶಾಲೆಗೆ ಹೋಗುವ ಯಾವುದೇ ವಿದ್ಯಾರ್ಥಿಗೂ ಪರೀಕ್ಷೆ ಎಂದರೆ ಬಹು ದೊಡ್ಡ ಸವಾಲು. ವರ್ಷವಿಡೀ ಓದಿ, ಕಲಿತಿದ್ದನ್ನು ಎರಡು- ಮೂರು ಗಂಟೆಗಳ ಅವಧಿಯಲ್ಲಿ ನೆನಪಿಟ್ಟು ಹಾಳೆಗಿಳಿಸುವುದು, ಅದರ ಮೌಲ್ಯಮಾಪನದ ಮೇಲೆ ಅಂಕವನ್ನು ನಿರ್ಧರಿಸುವುದು ಪರೀಕ್ಷೆಯ ಕುರಿತ ಹೆದರಿಕೆ, ಒತ್ತಡವನ್ನು ಹೆಚ್ಚಿಸುತ್ತದೆ. ಒಂಬತ್ತನೇ ತರಗತಿಯವರೆಗೆ ಕಡ್ಡಾಯ ತೇರ್ಗಡೆ ಜಾರಿಯಲ್ಲಿದೆ. ಆದರೆ ಹತ್ತನೇ ತರಗತಿ ನಂತರ ಉತ್ತಮ ಕಾಲೇಜಿಗೆ ಪ್ರವೇಶ ಸಿಗಬೇಕೆಂದಾದಾಗ ಮತ್ತು ಪಿಯುಸಿಯಲ್ಲಿ ವೃತ್ತಿಪರ ಕೋರ್ಸ್, ಆನಂತರ ಉನ್ನತ ಶಿಕ್ಷಣ ಆಯ್ಕೆ ಮಾಡಿಕೊಳ್ಳುವಾಗ ಒಂದೊಂದು ಅಂಕಕ್ಕೂ ಪರದಾಡುವ ಪರಿಸ್ಥಿತಿ ಇದೆ. ವರ್ಷದಿಂದ ವರ್ಷಕ್ಕೆ ನಿರ್ಣಾಯಕವಾದ ಈ ಪರೀಕ್ಷೆಗಳಲ್ಲಿ ತೀವ್ರವಾದ ಪೈಪೋಟಿ ಹೆಚ್ಚುತ್ತಲೇ ಇದೆ. ಹೀಗಾಗಿ, ಭವಿಷ್ಯವನ್ನೇ ನಿರ್ಣಯಿಸುವ ಇಂತಹ ಪರೀಕ್ಷೆಗಳನ್ನು ವರ್ಷಕ್ಕೊಮ್ಮೆ ಎದುರಿಸುವಾಗ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಅಪಾರವಾದ ಒತ್ತಡ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕಾಗಿ ಪೋಷಕರಿಗೂ ಅಂಕ ಗಳಿಕೆಯೇ ಮುಖ್ಯವಾದ ಈ ಪರೀಕ್ಷೆಗಳ ಕುರಿತು ಎಲ್ಲಿಲ್ಲದ ಮಹತ್ವ ಮತ್ತು ಆತಂಕ.

ಪರೀಕ್ಷೆಯನ್ನು ನಡೆಸುವುದು ಸುಲಭವಾದ ಮಾತಲ್ಲ. ಅದರಲ್ಲೂ ನಿರ್ಣಾಯಕವಾದ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧವಾಗಿ ನಡೆಸಬೇಕು. ಅವುಗಳಿಗೆ ಅಗತ್ಯ ವ್ಯವಸ್ಥೆ, ಖರ್ಚುವೆಚ್ಚದ ಬಗ್ಗೆ ಯೋಚಿಸುವುದೂ ಮುಖ್ಯ. ಹಾಗೆಯೇ ಮೌಲ್ಯಮಾಪನದ ಗುಣಮಟ್ಟವನ್ನು ಕಾಯ್ದುಕೊಳ್ಳುವುದೂ ದೊಡ್ಡ ಹೊಣೆಯೇ ಸರಿ.

ಮಕ್ಕಳಿಗೆ ಪರೀಕ್ಷೆ, ಫಲಿತಾಂಶದ ಕುರಿತು ಅನಗತ್ಯ ಒತ್ತಡ ಸೃಷ್ಟಿಸಬಾರದು ಎನ್ನುವುದೇನೋ ಸರಿ. ಆದರೆ ಕಡ್ಡಾಯ ತೇರ್ಗಡೆ, ಮೂರು ಪರೀಕ್ಷೆಯಂತಹ ಕ್ರಮಗಳಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿದರೆ ಎನ್ನುವ ಆತಂಕವೂ ಜನರನ್ನು ಕಾಡುತ್ತಿದೆ. ಮೊದಲ ಪರೀಕ್ಷೆ ಕಡ್ಡಾಯ, ಉಳಿದೆರಡು ಐಚ್ಛಿಕ ಸರಿ. ಆದರೂ ಎಷ್ಟೇ ಅಂಕ ತೆಗೆದರೂ ಜಗತ್ತು ತೀರಾ ಸ್ಪರ್ಧಾತ್ಮಕವಾಗಿರುವ ಸಂದರ್ಭದಲ್ಲಿ, ಮೂರು ಪರೀಕ್ಷೆಗಳಿರುವಾಗ, ಎಲ್ಲವನ್ನೂ ಬರೆದು ಇನ್ನಷ್ಟು ಅಂಕಗಳನ್ನು ಪಡೆಯಬೇಕೆಂಬ ಒತ್ತಡ ಮಕ್ಕಳ ಮೇಲೆ ಹೆಚ್ಚುವ ಸಾಧ್ಯತೆ ಇದೆ. ಪೋಷಕರೂ ಮಕ್ಕಳಿಂದ ಮತ್ತಷ್ಟನ್ನು ನಿರೀಕ್ಷಿಸಬಹುದು.

ಶಿಕ್ಷಣ ತಜ್ಞರ ಪ್ರಕಾರ, ಮಕ್ಕಳಿಗೆ ಪರೀಕ್ಷೆಯ ಕುರಿತು ಸ್ವಲ್ಪಮಟ್ಟಿಗೆ ಒತ್ತಡ ಬೇಕು. ಹಾಗಿದ್ದಾಗ ಮಾತ್ರ ಅವರು ಮನಸ್ಸಿಟ್ಟು ಕಷ್ಟಪಟ್ಟು ಓದುತ್ತಾರೆ. ಈ ರೀತಿಯಾಗಿ ಮೂರು ಪರೀಕ್ಷೆಗಳಿದ್ದಾಗ, ಇದಲ್ಲದಿದ್ದರೆ ಅದು, ಆಮೇಲೆ ಓದೋಣ ಎಂದು ಮುಂದೂಡುವ, ಉದಾಸೀನ ಮಾಡುವ ಪ್ರವೃತ್ತಿಯನ್ನೂ ಅವರಲ್ಲಿ ಕಾಣಬಹುದು. ಹೀಗಾಗಿ, ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಜತೆ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸಲು ಸಮರ್ಥರಾಗುವ ಹಾಗೆ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರನ್ನು ಬಲಪಡಿಸುವ ಕಡೆಗೂ ಇಲಾಖೆ ಗಮನ ಹರಿಸುವುದು ಒಳ್ಳೆಯದು.



logoblog

Thanks for reading Hon'ble Minister of Education's reply to the question asked in the House about conducting 03 annual examination for SSLC and PUC children.

Previous
« Prev Post

No comments:

Post a Comment