ವಿಧಾನಪರಿಷತ್ತು (ಡಿ.09): ಪ್ರೌಢ ಶಾಲಾ ಶಿಕ್ಷಕರು ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆ ಬಡ್ತಿಗೆ ಅರ್ಹತಾ ಪರೀಕ್ಷೆ ನಡೆಸುವುದನ್ನು ರದ್ದುಪಡಿಸುವ ಬಗ್ಗೆ ಅಧಿವೇಶನ ಮುಕ್ತಾಯದೊಳಗೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಶಿಕ್ಷಕರ ಬಡ್ತಿ ನಿಯಮದಲ್ಲಿನ ಲೋಪ ಕುರಿತು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಮಧು ಬಂಗಾರಪ್ಪ, ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಶಿಕ್ಷಕರ ಬಡ್ತಿ ನೀಡುವುದಕ್ಕೆ ಕೆಲ ನಿಯಮ ರೂಪಿಸಲಾಗಿದೆ.
ಅದರಂತೆ ಪ್ರೌಢ ಶಾಲೆ ನೇಮಕಾತಿ ಸಂದರ್ಭದಲ್ಲಿ ಶೇ. 50 ಹುದ್ದೆಗಳನ್ನು ನೇರ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಿದರೆ ಉಳಿದ ಶೇ. 50ರಷ್ಟು ಹುದ್ದೆಗಳನ್ನು ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಬಡ್ತಿ ನೀಡುವ ಮೂಲಕ ಭರ್ತಿ ಮಾಡುವ ನಿಯಮ ಜಾರಿಗೊಳಿಸಲಾಗಿದೆ. ಅದೇ ರೀತಿ ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿ ವೇಳೆ ಶೇ. 75ರಷ್ಟು ನೇರ ನೇಮಕಾತಿ ಹಾಗೂ ಶೇ. 25ರಷ್ಟು ಹುದ್ದೆಗಳನ್ನು ಪ್ರೌಢಶಾಲೆ ಶಿಕ್ಷಕರಿಗೆ ಬಡ್ತಿ ನೀಡಿ ಭರ್ತಿ ಮಾಡಲಾಗುತ್ತಿದೆ.
ಉಪನ್ಯಾಸಕರಾಗಿ ಬಡ್ತಿ ಪಡೆಯಲಿಚ್ಛಿಸುವ ಶಿಕ್ಷಕರು ಅರ್ಹತಾ ಪರೀಕ್ಷೆ ಬರೆಯಬೇಕಿದ್ದು, ಅದರಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದವರು ಶೇ.55 ಹಾಗೂ ಪರಿಶಿಷ್ಟ ಜಾತಿ/ಪಂಗಡದವರು ಶೇ.50ರಷ್ಟು ಅಂಕಗಳನ್ನು ಪಡೆಯಬೇಕಿದೆ ಎಂದು ಹೇಳಿದರು.
ಅದಕ್ಕೆ ವಿರೋಧ ವ್ಯಕ್ತಪಡಿಸಿದ ಮರಿತಿಬ್ಬೇಗೌಡ ಸೇರಿದಂತೆ ಪ್ರತಿಪಕ್ಷ ಸದಸ್ಯರು, ಬಡ್ತಿಗಾಗಿ ಪ್ರೌಢಶಾಲಾ ಶಿಕ್ಷಕರು ಪರೀಕ್ಷೆ ಬರೆಯುವ ನಿಯಮದಿಂದಾಗಿ ಶಿಕ್ಷಕರಿಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ಇದು ರದ್ದು ಮಾಡಬೇಕು. ಅಲ್ಲದೆ, ಒಂದೇ ಇಲಾಖೆ ಅಡಿಯಲ್ಲಿ ಬಡ್ತಿ ನೀಡುವ ಅನುಪಾತದಲ್ಲಿ ಎರಡು ನಿಯಮವಿರುವುದು ಸರಿಯಲ್ಲ. ಹೀಗಾಗಿ ಪ್ರೌಢಶಾಲೆಗೆ ಬಡ್ತಿ ಪಡೆಯುವ ಶಿಕ್ಷಕರ ಪ್ರಮಾಣದಂತೆಯೇ ಪಿಯು ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯುವ ಪ್ರೌಢಶಾಲಾ ಶಿಕ್ಷಕರ ಪ್ರಮಾಣ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಉತ್ತರಿಸಿದ ಮಧು ಬಂಗಾರಪ್ಪ, ಅರ್ಹತಾ ಪರೀಕ್ಷೆ ಕುರಿತಂತೆ ಪ್ರೌಢಶಾಲಾ ಶಿಕ್ಷಕರು ನನ್ನ ಬಳಿಗೆ ಬಂದು ಅಳಲು ತೋಡಿಕೊಂಡಿದ್ದಾರೆ. ಶಿಕ್ಷಕರೇ ಪರೀಕ್ಷೆ ಬರೆಯುವುದಕ್ಕೆ ನನ್ನ ಸಹಮತವಿಲ್ಲ. ಹೀಗಾಗಿ ಮುಂದಿನ ವಾರ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅದನ್ನು ರದ್ದು ಮಾಡುವುದು ಅಥವಾ ಮಾರ್ಪಾಡು ಮಾಡುವ ಕುರಿತು ನಿರ್ಣಯಿಸಲಾಗುವುದು. ಇನ್ನು ಅನುಪಾತದಲ್ಲಿರುವ ವ್ಯತ್ಯಾಸದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

No comments:
Post a Comment