Friday, November 24, 2023

Follow these important points to achieve 100% SSLC result of your students!...

  Wisdom News       Friday, November 24, 2023
Hedding ; Follow these important points to achieve 100% SSLC result of your students!...

ನಿಮ್ಮ ವಿದ್ಯಾರ್ಥಿಗಳ SSLC ಫಲಿತಾಂಶ ಶೇ.100 ಕ್ಕೆ ತಲುಪಲು ಈ ಮಹತ್ವದ ಅಂಶಗಳನ್ನು ತಪ್ಪದೇ ಪಾಲಿಸಿ!
ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು | SSLC Result Improvement Plan
SSLC ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಮೊದಲ ಘಟ್ಟವಾಗಿದೆ. ಈ ಪರೀಕ್ಷೆಯು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶೈಕ್ಷಣಿಕ ಜೀವನದ ಮಾರ್ಗಸೂಚಿಯಂತೆ ಕೆಲಸ ಮಾಡುವುದಲ್ಲದೇ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಆದ್ದರಿಂದ, ಈ ಘಟ್ಟದಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ ವಿವಿಧ ಮತ್ತು ವಿನೂತನ ಕ್ರಿಯಾಯೋಜನೆ ತಯಾರಿಸಿವುದು ಅತ್ಯಂತ ಪ್ರಮುಖವಾಗಿದೆ.

ಅಪರ ಆಯುಕ್ತರ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಲಬುರಗಿ, ವಿಭಾಗ ಕಲಬುರಗಿ ಇವರು SSLC ಫಲಿತಾಂಶ ಸುಧಾರಣೆಗಾಗಿ ತಿಳಿಸಿರುವ ಹಲವು ಕ್ರಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಈ ಕ್ರಿಯಾಯೋಜನೆಯನ್ನು ತಪ್ಪದೇ ಅನುಷ್ಠಾನಗೊಳಿಸಿದಲ್ಲಿ ತಮ್ಮ ಶಾಲೆಯ ಫಲಿತಾಂಶ ಶೇ.100 ರಷ್ಟು ಆಗುವುದರಲ್ಲಿ ಯಾವುದೇ ಸಂದೇಹವಿರಲಾರದು.


✅ ವಿದ್ಯಾರ್ಥಿಗಳ ಶ್ರೇಣೀಕರಣ:
➤ ತರಗತಿಯ ಒಟ್ಟು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಆಧರಿಸಿ 12 ಗುಂಪುಗಳನ್ನಾಗಿ ವಿಂಗಡಿಸುವುದು.

➤ ಪ್ರತಿ ಗುಂಪಿನಲ್ಲಿ 2 ಒಳಗುಂಪುಗಳು (Sub groups) ಅಂದರೆ ಸರಾಸರಿಗಿಂತ ಹೆಚ್ಚು ಮತ್ತು ಕಡಿಮೆ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳನ್ನು ಒಳಗೊಂಡಿರಬೇಕು.


➤ ಈ ಗುಂಪನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ರಚಿಸಿಕೊಂಡು ವರ್ಷಪೂರ್ತಿ ಸಿ.ಸಿ.ಇ. ಚಟುವಟಿಕೆಗಳಿಗೆ ಸ್ಪರ್ಧಾತ್ಮಕವಾಗಿ ಬಳಸಿಕೊಳ್ಳುವುದು.

➤ ಶ್ರೇಣೀಕೃತ ಗುಂಪನ್ನು ಎಲ್ಲಾ ಶಿಕ್ಷಕರಿಗೆ ತಲಾ ಎರಡು ಗುಂಪನ್ನು ದತ್ತು ನೀಡಿ ಉಸ್ತುವಾರಿ ವಹಿಸುವುದು.
 
✅ ಬರವಣಿಗೆ ಕೌಶಲ್ಯ ಹೆಚ್ಚಿಸುವುದು:
➤ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ದಿನಕ್ಕೊಂದು ಪುಟದಂತೆ ಬರವಣಿಗೆ ನೀಡಿ ಅಕ್ಷರಗಳ ದೋಷಗಳನ್ನು ತಿದ್ದುವುದರ ಮೂಲಕ ಶಿಕ್ಷಕರು ಮಾರ್ಗದರ್ಶನ ನೀಡುವುದು.


➤ ಸ್ವತಃ ಆಯಾ ವಿಷಯದ ಶಿಕ್ಷಕರು ತರಗತಿ ಸಮಯದಲ್ಲಿ ಉಕ್ತ ಲೇಖನ ನೀಡಿ ತಕ್ಷಣ ದೋಷಪೂರಿತವಾದ ಬರವಣಿಗೆ ಮಕ್ಕಳಿಗೆ ತಿಳಿಹೇಳವುದು.


➤ ವಿದ್ಯಾರ್ಥಿಗಳಿಗೆ ಅಭ್ಯಾಸ ಹಾಳೆಗಳ ಮೂಲಕ ಬರವಣಿಗೆ ಕೌಶಲ್ಯ ಹೆಚ್ಚಿಸುವುದು.

➤ ವಿಜ್ಞಾನ ಹಾಗೂ ಗಣಿತ, ಸಮಾಜ ವಿಜ್ಞಾನ ವಿಷಯಗಳಲ್ಲಿ ದಿನಕ್ಕೊಂದು ಚಿತ್ರ ಮತ್ತು ಸೂತ್ರ ಬರೆಯುವ ಅಭ್ಯಾಸವನ್ನು ರೂಢಿಸುವುದು.
 
✅ ಮಕ್ಕಳ ಸತತ ಗೈರು ಹಾಜರಿ ತಪ್ಪಿಸುವುದು:
➤ ಸತತ 3 ದಿನ ಗೈರು ಹಾಜರಿ ಇರುವ ವಿದ್ಯಾರ್ಥಿಗಳ ಪಟ್ಟಿ ಮಾಡಿ ಅಂತಹ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪಾಲಕ ಪೋಷಕರಿಗೆ ತಿಳಿಹೇಳುವುದು.

➤ ಮಕ್ಕಳು ಹಾಗೂ ಪೋಷಕರಿಗೆ ಪರೀಕ್ಷೆಗೆ ಹಾಜರಾಗಲು ಎಸ್.ಎಸ್.ಎಲ್.ಸಿ. ಮಂಡಳಿ ನಿಯಮವಾದ ಶೇಕಡಾ 75%ರಷ್ಟು ಕಡ್ಡಾಯ ಹಾಜರಾತಿಯ ಮನವರಿಕೆ ಮಾಡಿಸುವುದು.

➤ ಪ್ರತಿ ತಿಂಗಳು ಪಾಲಕ ಮತ್ತು ಪೋಷಕರ ಸಭೆಯಲ್ಲಿ ಅಯಾ ವಿದ್ಯಾರ್ಥಿಗಳ ಹಾಜರಾತಿ ಪ್ರಸ್ತಾಪಿಸಿ ಪಾಲಕರ ಗಮನಕ್ಕೆ ತರುವುದು

ಪ್ರತಿ ತಿಂಗಳು ಮಕ್ಕಳ ಹಾಜರಾತಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸುವ ಮೂಲಕ ಅತಿ ಹೆಚ್ಚು ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆ ನೀಡುವುದರ ಮೂಲಕ ಪ್ರೋತ್ಸಾಹ ನೀಡುವುದು.

➤ ಇದರಿಂದ ಕಲಿಕೆಯಲ್ಲಿ ನಿರಂತರತೆ ಕಾಪಾಡಿ ಫಲಿತಾಂಶ ಹೆಚ್ಚಿಸುವುದು.
 
✅ ವಾರಬಂಧಿ ಯೋಜನೆ: 
➤ ಪ್ರತಿವಾರ ಆಯಾ ವಿಷಯಕ್ಕೆ ನಿಗಧಿಪಡಿಸಿದ ಕಲಿಕಾಂಶವನ್ನು ಪೂರ್ಣಗೊಳಿಸುತ್ತಾ ಸಾಗುವುದು.

➤ ನಿಗಧಿಪಡಿಸಿದ ಕಲಿಕಾಂಶವನ್ನು ವಿದ್ಯಾರ್ಥಿಯು ಪೂರ್ಣಗೊಳಿಸದಿದ್ದಲ್ಲಿ ಇದೇ ಕಲಿಕಾಂಶವನ್ನು ಮುಂದಿನ ವಾರದಲ್ಲಿ ಪನರ್ ಮನನವಾಗುವರೆಗೂ ಮುಂದುವರಿಸುವುದು.

➤ ಒಂದು ಕಲಿಕಾಂಶವನ್ನು ಪೂರ್ಣಗೊಳಿಸಿದ ಮೇಲೆ ಹೊಸ ಕಲಿಕಾಂಶವನ್ನು ತೆಗೆದುಕೊಳ್ಳುವುದು.

➤ ಪ್ರತಿವಾರ ಪೂರ್ಣಗೊಂಡ ಕಲಿಕಾಂಶದ ಫಲಿತಾಂಶವನ್ನು ಈ ಕಛೇರಿಯಿಂದ ನೀಡುವ ಗೂಗಲ್ ಶೀಟನಲ್ಲಿ ಕಡ್ಡಾಯವಾಗಿ ಭರ್ತಿ ಮಾಡುವುದು.
 
✅ ವಿಷಯ ಶಿಕ್ಷಕರ ವೇದಿಕೆ ಕ್ರಿಯಾಶೀಲಗೊಳಸುವುದು:
➤ ತಾಲೂಕಾ ಹಂತದಲ್ಲಿ ತಿಂಗಳದ ಮೊದಲನೇ ಶನಿವಾರ ಮತ್ತು ಮೂರನೇ ಶನಿವಾರ ಕ್ರಮವಾಗಿ ಭಾಷಾ ಮತ್ತು ಕೋರ್ ವಿಷಯಗಳ ವಿಷಯ ಶಿಕ್ಷಕರ ವೇದಿಕೆ ಮೂಲಕ ಸಮಾಲೋಚನೆ ಸಭೆ ನಡೆಸಿ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗೊಳಿಸುವುದು.

➤ ಅವಿಷ್ಕೃತ ಮತ್ತು ಹೊಸ ಬೋಧನಾ ತಂತ್ರ ಮತ್ತು ಉತ್ತಮ ಆಚರಣೆ ಮತ್ತು ವಿಧಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ತರಗತಿ ಕೋಣೆಯಲ್ಲಿ ಅಳವಡಿಸಿಕೊಂಡು ಪರಿಣಾಮಕಾರಿ ಬೋಧನೆ ಮಾಡುವುದು.

ಆಯಾ ವಿಷಯದಲ್ಲಿ ನುರಿತ, ಅನುಭವಿ ಮತ್ತು ವಿಷಯ ತಜ್ಞರಿಂದ ಕಠಿಣಾಂಶಗಳ ಬಗ್ಗೆ ಮಾದರಿ ಪಾಠ, ವಿಶೇಷ ಉಪನ್ಯಾಸ ಮತ್ತು ಮಾರ್ಗದರ್ಶನ ನೀಡುವುದು.

➤ ತಾವು ತಮ್ಮ ವಿಷಯದಲ್ಲಿ ಬೋಧನೆಯಲ್ಲಿ ಸವಾಲು ಅಥವಾ ಸಮಸ್ಯೆಗಳ ಪಟ್ಟಿಮಾಡಿಕೊಂಡು ವಿಷಯ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳವುದು.
 
✅ ದತ್ತು ಶಾಲಾ ಕಾರ್ಯಕ್ರಮ ಪರಿಣಾಮಗೊಳಿಸುವುದು:
➤ ಜಿಲ್ಲಾ ಮತ್ತು ತಾಲೂಕಾ ಹಂತದ ಮೇಲುಸ್ತುವಾರಿ ಅಧಿಕಾರಿಗಳು ದತ್ತು ನೀಡಿದ ಶಾಲೆಗಳಿಗೆ ಪ್ರತಿ ತಿಂಗಳ ಭೇಟಿ ನೀಡಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಿ ಮಾರ್ಗಶ್ರನ ನೀಡುವುದು.

➤ ಪ್ರತಿ ತಿಂಗಳ ಕನಿಷ್ಠ 2 ಬಾರಿ ಆದರೂ ದತ್ತು ಶಾಲೆಗೆ ಭೇಟಿ ನೀಡುವುದು.

➤ ದತ್ತು ಪಡೆದ ಅಧಿಕಾರಿಗಳು ಬೆಳಿಗ್ಗೆ ಮತ್ತು ಸಾಯಂಕಾಲ ಕನಿಷ್ಠ ಇಬ್ಬರು ವಿದ್ಯಾರ್ಥಿಗಳ ಪೋಷಕರೊಂದಿಗೆ ಕಲಿಕೆ ಕುರಿತು ಮಾತನಾಡುವುದು. ಹಾಗೂ ಸೂಕ್ತ ಮಾರ್ಗದರ್ಶನ ನೀಡುವುದು.

➤ ಭೇಟಿ ನೀಡಿದ ಸಂಧರ್ಭಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಕಲಿಕಾ ಸಾಧಕ ಮತ್ತು ಬಾಧಕ ಕುರಿತು ಮುಖ್ಯ ಗುರುಗಳು ಹಾಗೂ ವಿಷಯ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡುವುದು.

➤ ಪ್ರತಿ ತಿಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿದ್ಯಾರ್ಥಿಗಳ ಅಂಕಿ ಅಂಶಗಳ ಅನುಗುಣವಾಗಿ ಪ್ರಗತಿಯನ್ನು ದಾಖಲಿಸಿ ವರದಿ ಸಲ್ಲಿಸುವುದು. 6) ಈ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನ ಗೊಳಿಸಿದವರಿಗೆ ಹಾಗೂ ಪರಿಶ್ರಮ ವಹಿಸಿದವರಿಗೆ ಕಿರು ಕಾಣಿಕೆ ನೀಡುವುದರ ಮೂಲಕ ಗೌರವಿಸುವುದು.

✅ ವಿಷಯವಾರು ರಸ ಪ್ರಶ್ನೆ ಕಾರ್ಯಕ್ರಮ ರೂಪಿಸುವುದು:
➤ ಪ್ರತಿ ತಿಂಗಳು, 2ನೇ ಶನಿವಾರ ಮತ್ತು 4ನೇ ಶನಿವಾರ ಕ್ರಮವಾಗಿ ಭಾಷೆ ಮತ್ತು ಕೋರ ವಿಷಯಗಳನ್ನು ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.

➤ ಈಗಾಗಲೇ ಶ್ರೇಣೀಕರಿಸಿ 6 ಗುಂಪುಗಳನ್ನಾಗಿ ಮಾಡಿದ ತಂಡಗಳಿಗೆ ಏಕ ಕಾಲಕ್ಕೆ ಭಾಷಾ ಮತ್ತು ಕೋರ್ ವಿಷಯಗಳಿಗೆ ಬೋಧನೆ ಮಾಡಿದ ಕಲಿಕಾಂಶಕ್ಕನುಗುಣವಾಗಿ ಆಯಾ ವಿಷಯದ 5 ಸುತ್ತುಗಳ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸುವುದು.
 
➤ ರಸಪ್ರಶ್ನೆ ಕಾರ್ಯಕ್ರಮದ ನಂತರ ಕೇಳಿದ ಪ್ರಶ್ನೆಗಳಿಗೆ ಮಕ್ಕಳಿಗೆ ನೀಡಿ ಲಿಖಿತ ರೂಪದಲ್ಲಿ ಯಾರ ಸಹಾಯವಿಲ್ಲದೆ ಪಡೆದುಕೊಳ್ಳುವುದು.
 
✅ ಆಪ್ತ ಸಮಾಲೋಚನೆ ಹಾಗೂ ಮನೆ ಮನೆ ಭೇಟಿ: 
➤ ಪ್ರತಿ ವರ್ಷದಲ್ಲಿ ಎರಡು ಬಾರಿ ಅಂದರೆ ಅಕ್ಟೋಬರ್ ಮತ್ತು ಜನವರಿ ತಿಂಗಳುಗಳಲ್ಲಿ ವಿದ್ಯಾರ್ಥಿಗಳನ್ನು ಪಾಳಿ ಪದ್ಧತಿಯಲ್ಲಿ ದಿನಕ್ಕೆ 10 ವಿದ್ಯಾರ್ಥಿಗಳಂತೆ ವೇಳಾ ಪಟ್ಟಿ ನಿಗಧಿಪಡಿಸುವುದು.

➤ ಪ್ರತಿ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಅಭ್ಯಾಸ ಸಾಮಗ್ರಿಗಳಾದ ಪಠ್ಯ ಪುಸ್ತಕ, ನೋಟ್ಸ್ ಹಾಗೂ ಇತರ ರೆಪರೆನ್ಸ್ ಪುಸ್ತಕಗಳನ್ನು ಪರಿಶೀಲಿಸುವುದರೊಂದಿಗೆ ಅಪಡೇಟ್ ಮಾಡುವುದು. 

➤ ಕಲಿಕಾ ವಾತಾವರಣ ಬಗ್ಗೆ ಆಪ್ತ ಸಮಾಲೋಚಿಸಿ ದಾಖಲಿಸಿಕೊಳ್ಳುವುದು ನಂತರ ಶಿಕ್ಷಕರ ಸಭೆಯಲ್ಲಿ ಚರ್ಚಿಸಿ ಸಮಸ್ಯಾತ್ಮಕ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಮನೆಗಳಿಗೆ ಅನೀರಿಕ್ಷಿತ ಭೇಟಿ ನೀಡಿ ಪೋಷಕರಿಗೆ ಕಲಿಕಾ ಪ್ರಗತಿ ಕುರಿತು ಮನವರಿಕೆ ಮಾಡುವುದು.

✅ ಪೋಷಕರ/ತಾಯಂದಿರ ಸಭೆ:
➤ ಪಾಲಕ ಮತ್ತು ಪೋಷಕರಿಗೆ ಎಸ್.ಎಸ್.ಎಲ್. ಸಿ. ಪರೀಕ್ಷೆಯ ಮಹತ್ವದ ಬಗ್ಗೆ ಕನಿಷ್ಠ ೧೫ ಅಂಶಗಳನ್ನು ಗುರುತಿಸಿ ಅರಿವು ಮೂಡಿಸುವುದು.

➤ ಪಾಲಕ ಮತ್ತು ಪೋಷಕರಿಗೆ ಬಿಡುವು ಅಥವಾ ಸಾಯಂಕಾಲದ ನಂತರ ಸಭೆ ನಡೆಸುವುದು.

➤ ತಿಂಗಳಿಗೊಮ್ಮೆ ಸಭೆ ಕರೆದು ತಮ್ಮ ಮಕ್ಕಳ ಪ್ರಗತಿಯನ್ನು ಪರಿಶೀಲಿಸುವುದು.

➤ ಮಕ್ಕಳ ಸ್ವ ಅಭ್ಯಾಸ ವೇಳಾಪಟ್ಟಿ ರಚಿಸಿಕೊಂಡು ವೇಳಾಪಟ್ಟಿಯಂತೆ ಅಧ್ಯಯನ ಕೈಗೊಳ್ಳುವುದನ್ನು ಖಾತ್ರಿ ಪಡಿಸಿಕೊಳ್ಳುವುದು.

➤ ಮಕ್ಕಳ ಅರೋಗ್ಯ ಮತ್ತು ಸ್ವಾಸ್ತ್ಯ ಕಡೆಗೆ ಹೆಚ್ಚು ಗಮನ ಹರಿಸುವುದರ ಕುರಿತು ತಿಳಿಹೇಳುವುದು.

➤ ಮಕ್ಕಳಿಗೆ ಯಾವುದೇ ಕಾರಣಕ್ಕೂ ಗೈರುಹಾಜರಾಗದಂತೆ ನೋಡಿಕೊಳ್ಳುವುದು ಹಾಗೂ ಶೇಕಡಾ 75 ಹಾಜರಾತಿ ಕಡ್ಡಾಯವಿರುವ ಬಗ್ಗೆ ಮನವರಿಕೆ ಮಾಡಿಸುವುದು.

➤ ಪಾಲಕರು ತಮ್ಮ ಮಕ್ಕಳ ಕಲಿಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸುವುದು.

✅ ವಿಷಯ ಶಿಕ್ಷಕರ ಕ್ಲಸ್ಟರ್ ಗುಂಪು ರಚನೆ:
➤ ಪ್ರತಿ ಕ್ಲಸ್ಟರ್ ನಲ್ಲಿ ಅನುಭವಿ ಮತ್ತು ನುರಿತ ವಿಷಯ ತಜ್ಞರನ್ನು ತಮ್ಮ ಕ್ಲಸ್ಟರ್ ನ ಸಂಬಂಧಿಸಿದ ವಿಷಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡುವುದು.

➤ ವಿಷಯವಾರು ಕ್ಲಸ್ಟರ್ ನ ವಾಟ್ಸಾಪ್ ಗ್ರೂಪ್ ರಚನೆ ಮಾಡಿ ವಿಷಯ ವಿನಿಮಯ ಮಾಡಿಕೊಳ್ಳುವುದು.

➤ ಜೂಮ್ ಮೀಟಿಂಗ್ ಮೂಲಕ ತಮಗೆ ಕಠಿಣವಾದ ಕಲಿಕಾಂಶಗಳ ಮತ್ತು ಶಾಲೆಯಲ್ಲಿ ಹಮ್ಮಿಕೊಂಡ ವಿಷಯಕ್ಕೆ ಸಂಬಂಧಿಸಿದ ವಿನೂತನ ಕಾರ್ಯಕ್ರಮಗಳನ್ನು ವಿನಿಮಯ ಮಾಡಿಕೊಳ್ಳುವುದು.

➤ ಮುಖ್ಯಗುರುಗಳು ಪರಸ್ಪರ ಚರ್ಚಿಸಿ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಶಿಕ್ಷಕರನ್ನು ಕರೆಯಿಸಿ ಬೋಧನೆ ಮಾಡಿಸುವುದು.

✅ ತೆರೆದ ಪುಸ್ತಕ ಪರೀಕ್ಷೆ:
➤ ಮಕ್ಕಳು ಪ್ರಶ್ನೆಗಳಿಗೆ ಪುಸ್ತಕದಲ್ಲಿ ಉತ್ತರ ಹುಡುಕಿ, ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಹೆಚ್ಚಿಸುವುದು.

➤ ವಿಷಯವಾರು 25 ಅಂಕಗಳಿಗೆ ಪ್ರಶ್ನೆ ಪತ್ರಿಕೆ ರಚಿಸಿ ವಿದ್ಯಾರ್ಥಿಗಳಿಗೆ ನೀಡಿ ಉತ್ತರ ಬರೆಯಲು ತಿಳಿಸುವುದು. 

➤ ಪ್ರತಿ ತಿಂಗಳು ಒಂದೊಂದು ಆಯಾ ವಿಷಯವಾರು ತೆರೆದ ಪುಸ್ತಕ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಿ ಮಕ್ಕಳಿಗೆ ಮಾರ್ಗದರ್ಶನ ಮಾಡುವುದು. 

➤ ಮಕ್ಕಳಿಗೆ ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ಹೆಚ್ಚಿಸುವುದು. 

➤ ಪ್ರಶ್ನೆಗೆ ನಿರ್ಧಿಷ್ಟ ಉತ್ತರ ಬರೆಯವ ವಿಧಾನ ಕಲಿಯಲು ಉತ್ತೇಜಿಸುವುದು. 

➤ ಉತ್ತರ ಪತ್ರಿಕೆ ಬಿಡಿಸಲು ಬೇಕಾಗುವ ಸಮಯ ಪಾಲನೆ ತಿಳುವಳಿಕೆ ಮೂಡಿಸುವುದು.
 
✅ ಶಿಕ್ಷಕರ ಎರವಲು ಸೇವೆ:
➤ ವಿಷಯ ಶಿಕ್ಷಕರು ಖಾಲಿ ಇರುವ ಮತ್ತು ಅತಿಥಿ ಶಿಕ್ಷಕರು ಇರುವ ಶಾಲೆಯಲ್ಲಿ ಎರವಲು ಶಿಕ್ಷಕರ ಸೇವೆ ಪಡೆಯುವುದರ ಮೂಲಕ ಪಠ್ಯಕ್ರಮ ಪೂರ್ಣಗೊಳಿಸುವುದು. 

➤ ಇದರಿಂದ ಶಿಕ್ಷಕರ ಕೊರತೆಯನ್ನು ನೀಗಿಸುವುದು. 

➤ ಅನುಭವಿ ಸಂಪನ್ಮೂಲ ಶಿಕ್ಷಕರಿಂದ ಎಲ್ಲಾ ಮಕ್ಕಳಿಗೆ ವಲಯ ಮಟ್ಟದಲ್ಲಿ ಕಾರ್ಯಗಾರ ಏರ್ಪಡಿಸುವುದು.

➤ ಸಂಪನ್ಮೂಲ ಶಿಕ್ಷಕರ ಮಾರ್ಗಶ್ರನ ಮತ್ತು ಪಾಠ ಬೋಧನೆ ಮುಖಾಂತರ ವಿಷಯ ದೃಢೀಕರಣಗೊಳಿಸುವುದು.
 
✅ ಸಹಾಯವಾಣಿ ಬಳಕೆ:
➤ ವಿಷಯವಾರು ತಾಲೂಕಾ ಹಂತದಲ್ಲಿ ಕನಿಷ್ಠ 3 ರಿಂದ 4 ಸಂಪನ್ಮೂಲ ಶಿಕ್ಷಕರನ್ನು ಗುರುತಿಸಿ ಅವರ ದೂರವಾಣಿ ಸಂಖ್ಯೆಯನ್ನು ನೀಡುವುದು.

➤ ವಿದ್ಯಾರ್ಥಿಗಳು ತಾವು ಅಭ್ಯಾಸ ಮಾಡುವಾಗ ಎದುರಾಗುವ ವಿಷಯವಾರು ಸಮಸ್ಯೆಗಳನ್ನು ಆಯಾ ವಿಷಯವಾರು ಶಿಕ್ಷಕರಿಗೆ ದೂರವಾಣಿ ಕರೆ ಮಾಡಿ ಪರಿಹಾರ ಕಂಡುಕೊಳ್ಳುವುದು. ಮತ್ತು ವಾಟ್ಸಪ್ ಮೂಲಕ ಪ್ರಶ್ನೆ ಕೇಳುವುದು.

➤ ಗುರುತಿಸಿದ ಸಮಸ್ಯೆಗಳನ್ನು ವಿಷಯವಾರು ಶಿಕ್ಷಕರು ಪ್ರಶ್ನೆ ಕೇಳಿದ ವಿದ್ಯಾರ್ಥಿಗಳ ಮಾಹಿತಿ ಮತ್ತು ನೀಡಿದ ಉತ್ತರವನ್ನು ದಾಖಲೀಕರಣಗೊಳಿಸುವುದು.

➤ ವಿಷಯವಾರು ಸಹಾಯವಾಣಿ ಸಂಖ್ಯೆಗಳನ್ನು 10ನೇ ತರಗತಿ ಕೋಣೆಯಲ್ಲಿ ತೂಗು ಹಾಕಿ ಸದುಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸುವುದು.

✅ ಬಾಗಿಲು ಮುಚ್ಚದ ಶಾಲೆ:
➤ ಮುಖ್ಯ ಗುರುಗಳು ಪ್ರತಿನಿತ್ಯ ಒಬ್ಬರು ಶಿಕ್ಷಕರ ಸರದಿಯಂತೆ ಶಾಲೆಯನ್ನು ಮುಚ್ಚದೆ ವಿದ್ಯಾರ್ಥಿಗಳಿಗೆ ಅಭ್ಯಾಸ ಅನುಕೂಲಿಸುವುದರ ಮೂಲಕ ಹೆಚ್ಚಿನ ಕಲಿಕೆಗೆ ಅನುವು ಮಾಡಿಕೊಡುವುದು.

➤ ಶಾಲೆಯಲ್ಲಿ ವಿದ್ಯುತಚ್ಚಕ್ತಿ ಮತ್ತು ಆಸನದ ವ್ಯವಸ್ಥೆ ಗ್ರಂಥಾಲಯ ವಿಜ್ಞಾನದ ಉಪಕ್ರಮಗಳು ಪ್ರತಿ ಹಂತದಲ್ಲಿ ವೀಕ್ಷಿಸುವುದರಿಂದ ಕಲಿಕೆ ಖಾತ್ರಿಗೊಳಿಸುವುದು.

➤ ಮಗುವಿಗೆ ಅಭ್ಯಾಸ ಮಾಡಲು ಹೆಚ್ಚಿನ ಸಮಯಾವಕಾಶ ಕಲ್ಪಿಸುವುದರಿಂದ ಓದಲು, ಬರೆಯಲು ಮತ್ತು ಎದುರಾಗುವ ಸಮಸ್ಯೆಗಳಿಗೆ ತತ್ ಕ್ಷಣವೆ ಶಿಕ್ಷಕರ ಮಾರ್ಗದರ್ಶನ ನೀಡುತ್ತಾರೆ.

➤ ಈ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನ ಗೊಳಿಸಿದವರಿಗೆ ಹಾಗೂ ಪರಿಶ್ರಮ ವಹಿಸಿದವರಿಗೆ ಕಿರು ಕಾಣಿಕೆ ನೀಡುವುದರ ಮೂಲಕ ಗೌರವಿಸುವುದು.

➠ ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಪರ ಆಯುಕ್ತರ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಲಬುರಗಿ ಇವರು ಹೊರತಂದಿರುವ ಈ ಕೆಳಗಿನ PDF ನ್ನು ಡೌನ್ ಲೋಡ್ ಮಾಡಿಕೊಳ್ಳಿ: 

logoblog

Thanks for reading Follow these important points to achieve 100% SSLC result of your students!...

Previous
« Prev Post

No comments:

Post a Comment