Hedding ; The shortage of teachers is dire; Reference in ICSSR report! :06-11-2024
ಶಿಕ್ಷಕರ ಕೊರತೆ ಆಪತ್ತು; ಐಸಿಎಸ್‌ಎಸ್‌ಆರ್ ವರದಿಯಲ್ಲಿ ಉಲ್ಲೇಖ!. ದಿ:06-11-2024
1.41 ಲಕ್ಷ ಕಡಿಮೆ ಸಂಖ್ಯೆ ಉಪಾಧ್ಯಾಯರು: ದೇಶಕ್ಕೆ ಕರ್ನಾಟಕವೇ ಮೊದಲು! ಅಪಾಯದಲ್ಲಿ ಶೈಕ್ಷಣಿಕ ಗುಣಮಟ್ಟ: ಐಸಿಎಸ್‌ಎಸ್‌ಆರ್ ವರದಿಯಲ್ಲಿ ಉಲ್ಲೇಖ
ರಾಜ್ಯದಲ್ಲಿ 1.41 ಲಕ್ಷ ಶಿಕ್ಷಕರ ಕೊರತೆ ಇದ್ದು, ದೇಶದಲ್ಲಿ ಖಾಲಿ ಇರುವ ಶಿಕ್ಷಕರ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇದೇ ಶಾಲೆಗಳ ಗುಣಮಟ್ಟ ಶಿಕ್ಷಣಕ್ಕೆ ಕೊರತೆಯಾಗಿ ಪರಿಣಮಿಸಿದೆ.
ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರೀಸರ್ಚ್ (ಐಸಿಎಸ್‌ಎಸ್‌ಆರ್) ಸಿದ್ಧಪಡಿಸಿರುವ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಕೋಶದ ವರದಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಪರಿಸ್ಥಿತಿ ಈ ರೀತಿ ಇರುವಾಗ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ನಿರೀಕ್ಷೆ ಮಾಡುವುದು ಕಷ್ಟವಾಗಿದೆ. ಇನ್ನು, ಪ್ರತಿ ವರ್ಷ ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯವವರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಇದು ಕನ್ನಡ ಭಾಷಾ ಉಳಿವಿಗೆ ಸಂಕಷ್ಟ ತಂದೊಡ್ಡಲಿದೆ ಎಂಬ ಆತಂಕ ಎದುರಾಗಿದೆ.
ರಾಜ್ಯದಲ್ಲಿ 6,400 ಸರಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಇನ್ನು, 50ಕ್ಕಿಂತ ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಗಳ ಸಂಖ್ಯೆ 23 ಸಾವಿರದಷ್ಟಿದೆ. 2028ರ ಸಾಲಿಗೆ ಅಂದಾಜು 39 ಸಾವಿರ ಶಿಕ್ಷಕರು ನಿವೃತ್ತಿ ಹೊಂದಲಿದ್ದಾರೆ. ಆರ್‌ಟಿಇ ಕಾಯಿದೆ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿರಬೇಕು. ಅದೇ ರೀತಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ 35:1 ರಷ್ಟಿರಬೇಕೆಂಬ ನಿಯಮ ಇದೆ. ಆದರೆ ಈ ಪ್ರಮಾಣದಲ್ಲಿ ಶಿಕ್ಷಕರು ಇಲ್ಲ.
70,915 ಸರಕಾರಿ, ಖಾಸಗಿ ಸೇರಿ ಒಟ್ಟು ಶಾಲೆಗಳು
1.04 ಕೋಟಿ 1-10ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆ
3.83 ಲಕ್ಷ ಶಿಕ್ಷಕರ ಸಂಖ್ಯೆ
68% 35:1 ಅನುಪಾತದಂತೆ ಲಭ್ಯ ಪ್ರೌಢಶಾಲೆ ಶಿಕ್ಷಕರ ಪ್ರಮಾಣ
27% ಪ್ರಾಥಮಿಕ ಶಾಲೆಯ ಶಿಕ್ಷಕರ ಕೊರತೆ ಪ್ರಮಾಣ
115 ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ
2023-24ರಲ್ಲಿ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ರೂಪಿಸಿರುವ ವರದಿಯ ಪ್ರಕಾರ, ರಾಜ್ಯದಲ್ಲಿ 115 ಸರಕಾರಿ ಶಾಲೆಗಳಲ್ಲಿ ಶೂನ್ಯ ಪ್ರವೇಶವಿದೆ. 241 ಸರಕಾರಿ ಶಾಲೆಗಳು 1-10 ಮಕ್ಕಳಿಗೆ ಪ್ರವೇಶ ಕಲ್ಪಿಸಿವೆ. ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಸಹ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಇನ್ನೂ ಬಹುತೇಕರ ಹುದ್ದೆಗಳ ಭರ್ತಿಯಾಗಬೇಕಿದೆ. ಶಿಕ್ಷಕರ ಕೊರತೆಯಿಂದಾಗಿ ಸರಕಾರಿ ಶಾಲೆಗಳಲ್ಲಿ ಪಾಠ-ಪ್ರವಚನಗಳು ನಿಗದಿತ ಸಮಯಕ್ಕೆ ನಡೆಯದೇ ಇರುವುದು ವಿವಿಧ ಪರೀಕ್ಷೆಗಳ ಫಲಿತಾಂಶದ ಕುಸಿತಕ್ಕೂ ಕಾರಣವಾಗಿದೆ.
“ಸರಕಾರಿ ಕನ್ನಡ ಶಾಲೆಗಳಲ್ಲಿ ಶಿಕ್ಷಕರು ಮತ್ತು ಮೂಲ ಸೌಕರ್ಯದ ಕೊರತೆಯನ್ನು ಸರಕಾರ ಮೊದಲು ನೀಗಿಸಬೇಕು. ಶಾಲೆ ಉಳಿವಿಗಾಗಿ ಸರಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಕನ್ನಡ ಮಾಧ್ಯಮ ನಡೆಸುತ್ತಿರುವ ಖಾಸಗಿ ಶಾಲೆಗಳಿಗೂ ಅನುದಾನ ನೀಡಬೇಕು.”
ಪುರುಷೋತ್ತಮ ಬಿಳಿಮಲೆ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
“ಸರಕಾರಿ ಶಾಲೆಗಳ ಅಭಿವೃದ್ಧಿ, ಸಬಲೀಕರಣಕ್ಕಾಗಿ ಈ ಹಿಂದೆ ಸರಕಾರ ಸಮಿತಿ ರಚಿಸಿತ್ತು. ಈ ಸಮಿತಿ ನೀಡಿರುವ ಶಿಫಾರಸು ಗಳನ್ನು ಅನುಷ್ಠಾನ ಮಾಡಬೇಕು. ದೂರದೃಷ್ಟಿ ಇಟ್ಟುಕೊಂಡು ಕನ್ನಡ ಶಾಲೆಗಳ ಉಳಿವಿಗಾಗಿ ಪ್ರತ್ಯೇಕ ನೀತಿ ರೂಪಿಸಬೇಕು.”
-ವಿ.ಪಿ.ನಿರಂಜನಾರಾಧ್ಯ ಶಿಕ್ಷಣ ತಜ್ಞ.
ಖಾಲಿ ಇರುವ ಹುದ್ದೆಗಳು ಶೈಕ್ಷಣಿಕ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಪರಿಸ್ಥಿತಿ ಈ ರೀತಿ ಇರುವಾಗ ಸರಕಾರಿ ಶಾಲೆಗಳನ್ನು ಉಳಿಸುವುದು ಹೇಗೆ? ಸರಕಾರಿ ಶಾಲೆಗಳಿಲ್ಲದೆ, ಮಕ್ಕಳು ಕನ್ನಡ ಕಲಿಯುವುದೆಲ್ಲಿ ಎಂದು ಶಿಕ್ಷಣ ತಜ್ಞರು ಪ್ರಶ್ನಿಸಿದ್ದಾರೆ.
ಅನರ್ಹ ಶಿಕ್ಷಕರಿದ್ದಾರೆ!
ಯುನೆಸ್ಕೊ ವರದಿ ಪ್ರಕಾರ, ಸರಕಾರಿ ಶಾಲೆಯಲ್ಲಿರುವ ಶೇ.15 ಹಾಗೂ ಖಾಸಗಿ ಶಾಲೆಗಳಲ್ಲಿರುವ ಶೇ.30 ಶಿಕ್ಷಕರು ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲ. ಅಲ್ಲದೆ, ಶಿಕ್ಷಕರು ತರಬೇತಿ ತೆಗೆದುಕೊಳ್ಳುವ ಪ್ರಮಾಣ ಸಹ ಕಡಿಮೆಯಾಗಿದೆ ಎಂದು ಉಲ್ಲೇಖ ಮಾಡಿದೆ.

No comments:
Post a Comment