ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಘಟ್ಟಕ್ಕೆ ಬಂದು ವಿದ್ಯಾರ್ಥಿಗಳು ತಲುಪಿದ್ದಾರೆ. ವಾರ್ಷಿಕ ಪರೀಕ್ಷೆಗಳ ಭರಾಟೆ ಆರಂಭಗೊಂಡಿದೆ. ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಂತೂ ತಮ್ಮ ಪಬ್ಲಿಕ್ ಪರೀಕ್ಷೆಯ ಬಗೆಗೆ ಸಹಜವಾಗಿಯೇ ತುಸು ಆತಂಕದಲ್ಲಿದ್ದಾರೆ. ಆದರೆ ಎಲ್ಲ ತರಗತಿಗಳಲ್ಲಿ ಎದುರಿಸಿದ ಪರೀಕ್ಷೆಯಂತೆ ಇದೂ ಕೂಡ ಒಂದು ಎಂಬ ಮನೋಭಾವದೊಂದಿಗೆ ಪರೀಕ್ಷೆಗೆ ಸಮರ್ಪಕ ತಯಾರಿ, ಅಧ್ಯಯನ ನಡೆಸಿದರೆ ಈ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಬಲು ಸುಲಭ. ಪರೀಕ್ಷೆ ತಯಾರಿ, ಪರೀಕ್ಷೆಯನ್ನು ಬರೆಯುವ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನಹರಿಸಿ ಅತ್ಮಸ್ಥೈರ್ಯವನ್ನು ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಮಾನಸಿಕ ಆರೋಗ್ಯ ತಜ್ಞರು ವಿದ್ಯಾರ್ಥಿಗಳು ಮತ್ತವರ ಹೆತ್ತವರಿಗೆ ನೀಡಿರುವ ಕೆಲವೊಂದು ಸಲಹೆಗಳು ಇಲ್ಲಿವೆ.
ಪರೀಕ್ಷೆ’ ಎಂಬುದು ಜೀವನದ ಒಂದು ಭಾಗ. ನಾವೆಲ್ಲರೂ ಜೀವನದಲ್ಲಿ ಒಂದೊಂದು ಪರೀಕ್ಷೆ ಎದುರಿಸಲೇಬೇಕು. ಹೀಗಾಗಿ ಪರೀಕ್ಷೆ ಎಂಬ ಶಬ್ದವೇ ಸಾಮಾನ್ಯವಾಗಿ ನಮ್ಮಲ್ಲಿ ಆತಂಕ-ಭಯ ಹುಟ್ಟಿಸುತ್ತದೆ. ಇತ್ತೀಚೆಗೆ ಮಕ್ಕಳಲ್ಲಿ ಪರೀಕ್ಷೆ ಎಂಬ ಆತಂಕ ಕಾಣಿಸಿಕೊಳ್ಳುತ್ತಿದೆ.
ಪರೀಕ್ಷೆಯ ಬಗ್ಗೆ ಸ್ವಲ್ಪ ಮಟ್ಟಿನ ಆತಂಕ ಇರಬೇಕು. ಆತಂಕ ಇದ್ದರೆ ಮಾತ್ರ ಓದಲು ಪ್ರೇರಣೆ ಸಿಗುತ್ತದೆ. ಆತಂಕವಿಲ್ಲದಿದ್ದರೆ ಏನೂ ಆಗದು. ಆದರೆ ಆತಂಕ ಯಾವತ್ತಿಗೂ ಕೂಡ ಅತಿಯಾಗಿರಬಾರದು. ಒಂದು ವೇಳೆ ಅತಿ ಯಾದ ಆತಂಕಕ್ಕೊಳಗಾದರೆ ವಿದ್ಯಾರ್ಥಿಯ ಕಲಿಕೆ, ಪರೀಕ್ಷೆ ಹಾಗೂ ಫಲಿತಾಂಶದ ಮೇಲೆ ಅದು ಪರಿಣಾಮ ಬೀರುತ್ತದೆ.
ಪರೀಕ್ಷೆ ಇನ್ನು ಕೆಲವೇ ದಿನ ಇರುವುದರಿಂದ “ಓದಿಲ್ಲ’ ಎಂಬ ಭಯ ವಿದ್ಯಾರ್ಥಿಗಳಲ್ಲಿ ಇರಕೂಡದು. ಬದಲಾಗಿ ಇಲ್ಲಿಯವರೆಗೆ ಎಷ್ಟು ಓದಿದ್ದಾರೋ ಅದನ್ನು ಮಾತ್ರ ಮತ್ತೆ ಮತ್ತೆ ಓದಿ, ಮನನ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಕೊನೆಯ ಹಂತದಲ್ಲಿರುವ ಕಾರಣದಿಂದ ಹೊಸ ಓದು ಮತ್ತಷ್ಟು ಆತಂಕ ತರಿಸಬಹುದು.
ಪರೀಕ್ಷಾ ತಯಾರಿ ಹೀಗಿರಲಿ
ಪರೀಕ್ಷೆಯ ಮುನ್ನಾ ದಿನ ಮಕ್ಕಳು ಕನಿಷ್ಠ 6 ಗಂಟೆ ನಿದ್ದೆ ಮಾಡಲೇಬೇಕು. ಶೇ.60 ರಷ್ಟು ಮಕ್ಕಳು ಪರೀಕ್ಷೆಯ ಮುನ್ನಾ ದಿನ ನಿದ್ದೆ ಮಾಡುವುದಿಲ್ಲ. ಬದಲಾಗಿ ರಾತ್ರಿಯವರೆಗೆ ಕುಳಿತು ಓದುತ್ತಾರೆ. ಇದು ಮರು ದಿನದ ಪರೀಕ್ಷೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ಅವರಲ್ಲಿ ಒತ್ತಡ ಅಧಿಕ ವಾಗುತ್ತದೆ. ಜತೆಗೆ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯ ದಿನ ಏನೂ ತಿನ್ನುವುದಿಲ್ಲ. ಇದು ಮತ್ತೂಂದು ಸಮಸ್ಯೆಗೆ ಕಾರಣವಾಗುತ್ತದೆ. ಬದಲಾಗಿ ಲಘು ಆಹಾರ ಸೇವಿಸಲೇಬೇಕು.
ಪರೀಕ್ಷೆಯ ಮುನ್ನ ಸಕಾರಾತ್ಮಕ ಭಾವನೆ ಯನ್ನು ಬೆಳೆಸಿಕೊಳ್ಳಬೇಕು. ಮನನ ಮಾಡಿ ಕೊಳ್ಳಬೇಕು. ಇದರ ಮೂಲಕ ಆತ್ಮಸ್ಥೈರ್ಯ ಬೆಳೆಸುವ ಪ್ರಯತ್ನ ಮಕ್ಕಳು ರೂಢಿಸಿಕೊಂಡರೆ ಉತ್ತಮ. ಪರೀಕ್ಷೆಗೆ ಒಂದು ವಾರ ಬಾಕಿ ಉಳಿದಿರುವಾಗಲೇ ಆರಾಮವಾಗಿರಲು ಮಕ್ಕಳು ನಿಯಮಿತವಾಗಿ ಉಸಿರಾ ಟದತ್ತ ಗಮನ ಕೇಂದ್ರೀಕರಿಸಿ ವ್ಯಾಯಾಮ ಮಾಡಿದರೆ ಉತ್ತಮ. ಇದರಿಂದಾಗಿ ದೇಹ ಹಾಗೂ ಮನಸ್ಸು ಶಾಂತವಾಗುತ್ತದೆ. ಇದು ನೆನಪಿನ ಶಕ್ತಿವೃದ್ಧಿಯಾಗಲು ಸಹಕಾರಿ.
ಪರೀಕ್ಷೆಗೂ ಮುನ್ನ ಪರೀಕ್ಷೆಯ ಬಗ್ಗೆ ಮಾತ್ರ ಗಮನಹರಿಸಬೇಕು. ಫಲಿತಾಂಶದ ಬಗ್ಗೆ ಅಲ್ಲ. ಚೆನ್ನಾಗಿ ಗೊತ್ತಿರುವ ಪ್ರಶ್ನೆಗೆ ಮೊದಲು ಉತ್ತರಿಸಿ, ಸ್ವಲ್ಪ ಗೊತ್ತಿರುವ ಪ್ರಶ್ನೆಗೆ ಮತ್ತೆ ಉತ್ತರಿಸುವ ಶೈಲಿ ಸಾಧ್ಯವಾದರೆ ಬೆಳೆಸಿಕೊಳ್ಳಿ. ಬಹುಮುಖ್ಯವಾಗಿ ಪ್ರಶ್ನೆಗಳು “ಕಷ್ಟ’ ಎಂಬ ಬಗ್ಗೆ ಗಾಬರಿಯಾಗಬೇಡಿ.
ಪರೀಕ್ಷೆ ಬಳಿಕ ಚರ್ಚೆ ಬೇಡ!
ಪರೀಕ್ಷೆಯ ಬಳಿಕ ಕೆಲವು ವಿದ್ಯಾರ್ಥಿಗಳು ಇತರ ಮಕ್ಕಳ ಜತೆಗೆ ಪ್ರಶ್ನೆ-ಉತ್ತರದ ಬಗ್ಗೆ ಚರ್ಚೆ ಮಾಡುತ್ತಾರೆ. ಒಂದು ವೇಳೆ ಆತಂಕ ಇರುವ ಮಕ್ಕಳಿಗೆ ಇಂತಹ ಚರ್ಚೆಯಿಂದಾಗಿ ತಾವು ತಪ್ಪು ಬರೆದಿದ್ದರೆ ಅಥವಾ ಉತ್ತರ ಗೊತ್ತಿದ್ದೂ ಬರೆಯದಿದ್ದರೆ ಆತಂಕ ಮತ್ತಷ್ಟು ಹೆಚ್ಚಾಗಬಹುದು. ಇದರಿಂದ ಮುಂದಿನ ಪರೀಕ್ಷೆಯ ತಯಾರಿ, ಓದಿನ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಆ ಪರೀಕ್ಷೆಯ ವಿಚಾರವನ್ನು ಮರೆತು ಬಿಡಿ; ಬದಲಾಗಿ ಮುಂದಿನ ಪರೀಕ್ಷೆ ಬಗ್ಗೆ ಮಾತ್ರ ನಿಮ್ಮ ಗಮನವನ್ನೆಲ್ಲ ಕೇಂದ್ರೀಕರಿಸಿ.
ಪರೀಕ್ಷೆ ನೆಲೆಯಲ್ಲಿ ವಿದ್ಯಾರ್ಥಿಗಳು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇತ್ತ ಹೆಚ್ಚಿನ ಲಕ್ಷ್ಯ ಹರಿಸುವುದು ಅತೀ ಮುಖ್ಯ ಜತೆಯಲ್ಲಿ ಮಾನಸಿಕ ಆರೋಗ್ಯ ಚೆನ್ನಾಗಿರ ಬೇಕು. ಕಲಿಕೆಯ ಮಧ್ಯೆ ಐದು ನಿಮಿಷ ಗಳ ರಿಲ್ಯಾಕ್ಸ್ ತೆಗೆದುಕೊಳ್ಳುವುದು ಉತ್ತಮ. ರಿಲ್ಯಾಕ್ಸ್ ವೇಳೆ ಟಿವಿ, ಮೊಬೈಲ್ ದಾಸರಾಗು ವುದಲ್ಲ. ಒಂದು ವೇಳೆ ಮಕ್ಕಳಿಗೆ ಏನೇ ಸಮಸ್ಯೆ ಇದ್ದರೆ ಹೆತ್ತವರಲ್ಲಿ ಮಾತನಾಡಿ ಹಾಗೂ ಅವರು ಕೂಡ ಮಕ್ಕಳ ಜತೆಗೆ ಪರೀಕ್ಷಾ ಸಮಯ
ದಲ್ಲಿ ಹೆಚ್ಚು ಮಾತನಾಡಿ, ಧೈರ್ಯ ತುಂಬಿ.
ಫಲಿತಾಂಶದ ಬಗ್ಗೆ ಆಲೋಚನೆ ಬೇಡ; ನನ್ನ ಉತ್ತರಪತ್ರಿಕೆಯನ್ನು ಯಾರು ತಿದ್ದುತ್ತಾರೋ ಎಂಬ ಬಗ್ಗೆ ಯೋಚಿಸಬೇಡಿ- ಬದಲಾಗಿ ಪರೀಕ್ಷೆ ಬರೆಯುವುದು ಮಾತ್ರ ನಮ್ಮ ಕರ್ತವ್ಯ ಎಂಬುದು ಮಕ್ಕಳ ನೆನಪಿನಲ್ಲಿರಲಿ.
ಅಂತೂ, ಫಲಿತಾಂಶ ಏನೇ ಇರಲಿ; ಅದನ್ನು ಸ್ವೀಕರಿಸಲೇಬೇಕು. ಯಾಕೆಂದರೆ ಈ ಪರೀಕ್ಷೆಯ ಫಲಿತಾಂಶ ನಿಮ್ಮ ಜೀವನವನ್ನು ವರ್ಣಿಸುವುದಿಲ್ಲ. ಬದಲಾಗಿ ಈ ಪರೀಕ್ಷೆಯಲ್ಲಿ ಮಾತ್ರ ಹೇಗೆ ಫಲಿತಾಂಶ ಇದೆ ಎಂಬುದನ್ನು ಮಾತ್ರ ಹೇಳುತ್ತದೆ. ಜೀವನದ ಪರೀಕ್ಷೆ ಮುಂದೆಯೂ ಇದೆ!
ಎಸೆಸೆಲ್ಸಿ ಟಿಪ್ಸ್
– ಆತಂಕ ಸಹಜ, ಆದರೆ ಅತಿಯಾದ ಆತಂಕ ಪಡುವ ಅಗತ್ಯವಿಲ್ಲ.
– ಪರೀಕ್ಷೆ, ಫಲಿತಾಂಶದ ಬಗೆಗೆ ತಲೆಕೆಡಿಸಿಕೊಳ್ಳುವ ಬದಲು ಓದಿನತ್ತ ಗಮನ ಕೇಂದ್ರೀಕರಿಸಿ.
– ಕೊನೆಯ ಹಂತದಲ್ಲಿ ಈವರೆಗೆ ಓದಿದ ವಿಷಯಗಳನ್ನು ಮತ್ತೂಮ್ಮೆ ಓದಿ ಸರಿಯಾಗಿ ಮನದಟ್ಟು ಮಾಡಿ ಕೊಳ್ಳಿ. ಹೊಸದಾಗಿ ಓದು ಆರಂಭಿಸು ವುದು ಆತಂಕವನ್ನು ಹೆಚ್ಚಿಸೀತು.
– ಪರೀಕ್ಷೆಯ ಮುನ್ನಾದಿನ ಕನಿಷ್ಠ 6 ಗಂಟೆ ನಿದ್ದೆ ಮಾಡಿ. ನಿದ್ದೆಗೆಟ್ಟು ಓದುವುದು ಸರಿಯಲ್ಲ.
– ಅಧ್ಯಯನ ಮತ್ತು ಪರೀಕ್ಷೆಯ ವೇಳೆ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನಹರಿಸಿ.
– ಸಕಾರಾತ್ಮಕ ಮನೋಭಾವ ಮೈಗೂಡಿಸಿಕೊಂಡಲ್ಲಿ ಆತಂಕ ಕಡಿಮೆಯಾಗುತ್ತದೆ.
– ಪರೀಕ್ಷೆ ಎದುರಿಸಿದ ಬಳಿಕ ಆ ಬಗ್ಗೆ ಚರ್ಚೆ ಬೇಡ, ಮುಂದಿನ ವಿಷಯದ ಪರೀಕ್ಷೆಗೆ ಸಜ್ಜಾಗುವುದೇ ನಿಮ್ಮ ಆದ್ಯತೆಯಾಗಲಿ.
ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿವೆ. ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮಾರ್ಚ್ 1ರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 21ರಿಂದ ಅಂತಿಮ ಪರೀಕ್ಷೆಗಳು ಆರಂಭವಾಗಲಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮಾರ್ಚ್‌ನಲ್ಲಿಯೂ, ಪದವಿ ವಿದ್ಯಾರ್ಥಿಗಳು ಎಪ್ರಿಲ್-ಮೇನಲ್ಲಿಯೂ ತಮ್ಮ ಸೆಮಿಸ್ಟರ್ ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ಒಟ್ಟಿನಲ್ಲಿ ಫೆಬ್ರವರಿಯಿಂದ ಮೇ ತಿಂಗಳವರೆಗೂ ಪರೀಕ್ಷೆಗಳ ಪರ್ವ. ಹೆತ್ತವರಿಗೆ ಮಕ್ಕಳನ್ನು ಬೆಳಗ್ಗೆ ಎಬ್ಬಿಸುವ ಕೆಲಸ. ಅದಕ್ಕಾಗಿ ಬೆಳಗ್ಗೆ ಏಳುವ ಮೊದಲೇ ಮಕ್ಕಳಿಗೆ ತಾಯಂದಿರಿಂದ ಗದರಿಕೆಯ ಮಾತು. ತಾವಾಗಿಯೇ ಎದ್ದು ತಮ್ಮ ಪಾಡಿಗೆ ತಾವೇ ಓದಿ ಬರೆಯುವ ವಿದ್ಯಾರ್ಥಿಗಳು ಕಡಿಮೆ. ಅವರನ್ನು ಸದಾ ಬೆನ್ನತ್ತುವ ಪಾಲಕರಿಗೆ ತಮ್ಮ ಮಕ್ಕಳು ಬೆಳಗ್ಗೆ ಏಳುತ್ತಿಲ್ಲ, ಓದುತ್ತಿಲ್ಲ, ನನ್ನ ಮಾತು ಕೇಳುತ್ತಿಲ್ಲ ಎಂಬ ಚಿಂತೆಯೇ ಹೆಚ್ಚು. ಹೆತ್ತವರಿಗೂ ಮಕ್ಕಳಿಗೂ ಸದಾ ಸಂಘರ್ಷವಾಗುವ ಸಮಯವೂ ಇದೆ. ಅಂತಿಮ ಕ್ಷಣದಲ್ಲಿ ಒತ್ತಡ ಹೆಚ್ಚಿ ಏನನ್ನೂ ಓದದೇ ಹಿಮ್ಮ್ಮುಖವಾಗುವ ವಿದ್ಯಾರ್ಥಿಗಳಿಗೂ ಕಡಿಮೆಯಿಲ್ಲ. ಅಧ್ಯಾಪಕರಿಗೂ ಬಿಡುವಿಲ್ಲ. ಬೆಳಗ್ಗೆ - ಸಂಜೆ ವಿಶೇಷ ತರಗತಿ, ಮನೆಗೆ ಬಂದ ಮೇಲೆ ಟ್ಯೂಷನ್, ವಸತಿ ಶಾಲೆಯಲ್ಲಿ ರಾತ್ರಿ 10 ರಿಂದ 11 ರವರೆಗೂ ಓದು, ಮೊಬೈಲ್ ವೀಕ್ಷಣೆಗೆ ಕಡಿವಾಣ, ಆಟಗಳಿಗೆ ವಿದಾಯ, ಟಿ.ವಿ.ಗೆ ಕರೆನ್ಸಿ ಹಾಕದ ಹೆತ್ತವರು, ದೂರದಲ್ಲಿರುವ ತಂದೆಯಿಂದ ಪದೇ ಪದೇ ಮಕ್ಕಳ ಬಗ್ಗೆ ವಿಚಾರಣೆ, ಶಾಲಾ ಕಾಲೇಜುಗಳಲ್ಲಿಯೂ ಹೆತ್ತವರ ಸಭೆ, ಅಭಿವೃದ್ಧಿ ಪತ್ರ ಹಿಡಿದುಕೊಂಡೇ ಮನೆಗೆ ದೌಡಾಯಿಸುತ್ತಿರುವ ಪಾಲಕರು, ಇದ್ಯಾವುದರ ರಗಳೆಯೇ ಬೇಡವೆಂದು ತಾವೇ ಸಹಿ ಹಾಕಿ ಅಭಿವೃದ್ಧಿ ಪತ್ರ ಒಪ್ಪಿಸುವ ಕೆಲವು ವಿದ್ಯಾರ್ಥಿಗಳು. ಇವೆಲ್ಲದಕ್ಕೂ ಕೇಂದ್ರ ಬಿಂದು ಪರೀಕ್ಷೆಯೇ ಆಗಿದೆ. ಪರೀಕ್ಷೆಯ ಬಗೆಗಿನ ಆತಂಕ, ನಿರ್ಲಕ್ಷ್ಯ ಕೂಡಾ ಈ ಚಿತ್ರಣಗಳಿಗೆ ಕಾರಣ ಆಗಿದೆ. ವಿದ್ಯಾರ್ಥಿಗಳೇ ಪರೀಕ್ಷೆಯ ಬಗ್ಗೆ ಆತಂಕ ಬೇಡ ಅದನ್ನು ಆಸ್ವಾದಿಸಿ. ಪರೀಕ್ಷೆಯ ಬಗ್ಗೆ ನಿರ್ಲಕ್ಷ್ಯ ಬೇಡ ಅದನ್ನು ಪ್ರೀತಿಸಿ. ಇಷ್ಟವಿಲ್ಲದಿದ್ದರೂ ಕಷ್ಟವಾದರೂ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಗಳನ್ನು ಬರೆಯುವುದು ಅನಿವಾರ್ಯ. ಯಾವುದು ಅನಿವಾರ್ಯವೋ ಅದನ್ನು ದೂರ ಮಾಡುವ ಬದಲು ಹತ್ತಿರವಾಗಿಸುವುದು ಹೆಚ್ಚು ಉತ್ತಮವಾಗಿದೆ. ಆದುದರಿಂದ ವಿದ್ಯಾರ್ಥಿಗಳೇ ಪರೀಕ್ಷೆಯ ಬಗೆಗಿನ ನಿಮ್ಮ ತಲ್ಲಣಗಳನ್ನು ಒಂದಿಷ್ಟು ದೂರ ಮಾಡಲು ಪಠ್ಯದಿಂದಾಚೆಗಿನ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗುತ್ತದೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆ ಪಾಲಕರಿಗೂ ಅನ್ವಯಿಸಲಿದೆ.
1.ಸಮಯವೇ ಸಂಪತ್ತು ಶಾಲಾ ಕಾಲೇಜುಗಳ ಅಂತಿಮ ತರಗತಿಯ ವಿದ್ಯಾರ್ಥಿಗಳ ಆಟೋಗಾಫ್‌ನಲ್ಲಿ ಬಹುತೇಕ ವಿದ್ಯಾರ್ಥಿ ಪ್ರಿಯ ಬರಹವೊಂದು ಭಾರೀ ಹಿಂದಿನಿಂದಲೂ ಕಾಣಿಸಿಕೊಳ್ಳುತ್ತಿದೆ.. ಅದು ಈಗಲೂ ಮುಂದುವರಿದಿದೆ ಎನ್ನುವುದೂ ಕೂಡಾ ಗಮನಾರ್ಹ. ‘‘ಪರೀಕ್ಷೆಯೆಂಬ ರಣರಂಗದಲ್ಲಿ ಪೆನ್ನೆಂಬ ಖಡ್ಗ ಹಿಡಿದು ಶಾಯಿಯೆಂಬ ರಕ್ತ ಸುರಿಸಿ ನೀನು ವಿಜಯಿಯಾಗು’’ ಇದು ಆ ಒಕ್ಕಣೆ. ಇದನ್ನು ಬರೆಯದವರೂ, ಓದದವರೂ ಕಡಿಮೆ. ಹಿರಿಯರ ಹಳೆಯ ಆಟೋಗ್ರಾಫ್ ತೆಗೆದು ನೋಡಿದರೂ ಈ ವಾಕ್ಯಗಳು ಕಾಣಸಿಗುತ್ತವೆ. ಈಗಿನ ವಿದ್ಯಾರ್ಥಿಗಳು ಆ ಪದವನ್ನು ಹಿರಿಯರಿಂದ ಬಂದ ಬಳುವಳಿ ಎಂಬಂತೆ ಸ್ವೀಕರಿಸಿ ಮುಂದುವರಿಸುತ್ತಿದ್ದಾರೆ. ವಿದ್ಯಾರ್ಥಿಗಳೇ ಪರೀಕ್ಷೆ ಎನ್ನುವುದು ರಣರಂಗ ಅಲ್ಲವೇ ಅಲ್ಲ. ಶಾಯಿಯಂತು ರಕ್ತವೂ ಅಲ್ಲ. ಆದರೆ ಪೆನ್ನು ಖಡ್ಗಕ್ಕಿಂತಲೂ ಹರಿತವಾದುದು ಎಂಬ ಮಾತಿದೆ. ಆದರೆ ಸದ್ಯಕ್ಕೆ ಪೆನ್ನನ್ನು ಖಡ್ಗ ಎಂಬುದಾಗಿ ತಿಳಿದು ಕೊಳ್ಳದೆ ಪೆನ್ನನ್ನು ಪೆನ್ನಾಗಿಯೇ ನೀವು ಬಳಸಿದರೆ ಸಾಕು. ಇಂತಹ ಮಾತನ್ನು ಬರೆದು ಬರೆದೇ ಪರೀಕ್ಷೆಯೆಂದರೆ ಯುದ್ಧವೆಂಬ ಭಾವನೆ ಬಂತೇನೋ? ನಿಜವಾಗಿಯೂ ಪರೀಕ್ಷೆ ಭಯ ಪಡುವಂತಹದ್ದಲ್ಲ. ಪ್ರೀತಿಸುವಂತಹದ್ದು. ನೀವು ಪರೀಕ್ಷೆಯನ್ನು ಶಿಕ್ಷಣದ ಒಂದು ಅಂಗವೆಂದು ಪರಿಗಣಿಸಿ. ನಾವು ಬೆಳಗ್ಗೆ ಎದ್ದು ಸ್ವಚ್ಛವಾಗುವುದು, ಉಪಾಹಾರ ಸೇವಿಸುವುದು, ಬಟ್ಟೆ ಬರೆ ತೊಳೆಯುವುದು, ನೀರು ಕುಡಿಯುವುದು, ನಿದ್ರಿಸುವುದು ಹೇಗೆ ಅನಿವಾರ್ಯವೋ ಹಾಗೇನೆ ಪರೀಕ್ಷೆಯೂ ಕೂಡಾ. ಕೆಲವರಿಗೆ ಬೆಳಗ್ಗೆ ಏಳುವುದು ಕಷ್ಟ ಔದಾಸೀನ್ಯ, ಇಷ್ಟವಲ್ಲದ ವಿಷಯ. ಆದರೆ ತಡವಾಗಿಯಾದರೂ ಏಳಲೇಬೇಕು. ಹಾಗಾದರೆ ಸ್ವಲ್ಪಬೇಗನೆ ನಿಯಮಿತವಾಗಿ ಎದ್ದರೆ ಒಂದಷ್ಟು ಹಗಲು ಹೆಚ್ಚು ಲಭಿಸುತ್ತದೆ. ದಿನಂಪ್ರತಿ 1 ಗಂಟೆ ಬೇಗ ಎದ್ದರೆ ತಿಂಗಳಿಗೆ 30 ಗಂಟೆ ಲಾಭ. ತಿಂಗಳಲ್ಲಿ ಒಂದು ದಿನ ಹೆಚ್ಚುವರಿ ಲಭಿಸುತ್ತದೆ. ಎಲ್ಲರೂ ಹೆಚ್ಚು ಸಮಯ ಬೇಕು ಎಂದು ಆಶಿಸುತ್ತಾರೆ. ಆದರೆ ದಿನಕ್ಕೆ 24 ಗಂಟೆಗಿಂತ ಹೆಚ್ಚು ಯಾರಿಗೂ ಇಲ್ಲ. ವಿದ್ಯಾರ್ಥಿಗಳಿಗೆ ಬೇಗನೇ ಏಳುವ ಪರಿಪಾಠ ಮನೆಯಲ್ಲಿ ಕಲಿಸಿದರೆ ಅವರಿಗೆ ಕಲಿಕೆಗೂ ಪರೀಕ್ಷೆಗೂ ಸಿದ್ಧರಾಗಲು ಸಹಕಾರಿ. ತಡವಾಗಿ ಎದ್ದರೆ ಆ ದಿನ ಹಾಳು. ಅದು ಜಡತ್ವದ ದಿನ. ಯಾವುದರಲ್ಲೂ ಆಸಕ್ತಿಯಿರುವುದಿಲ್ಲ. ನಿಯಮಿತವಾಗಿ ನಿದ್ರಿಸಿ ಬೆಳಗ್ಗೆ ಬೇಗನೆ ಏಳುವ ಪರಿಪಾಠ ಬೆಳೆಸಿಕೊಳ್ಳಿ. ಮುಂಜಾನೆಯೇ ತಮ್ಮ ತಮ್ಮ ಆಹಾರ ಅರಸಿ ಹೋಗುವ ಹಕ್ಕಿಗಳ ಸಾಲನ್ನೊಮ್ಮೆ ನೋಡಿ ಯಾವುದೇ ತರಬೇತಿ, ಶಿಕ್ಷಣ, ವಿಶೇಷ ಬುದ್ಧಿವಂತಿಕೆ ಮಾತು ಇಲ್ಲದೆ ಪ್ರಾಣಿ ಪಕ್ಷಿಗಳೂ ಕೂಡಾ ತಮ್ಮ ತಮ್ಮ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡುವಾಗ ನಾವೇಕೆ ನಿಯಮಿತವಾಗಿ ಬದುಕುವ ಪರಿಪಾಠ ಬೆಳೆಸಿಕೊಳ್ಳಬಾರದು.
No comments:
Post a Comment